ನವದೆಹಲಿ: ತುಳಿತಕ್ಕೊಳಗಾದವರನ್ನು ಮೇಲೆತ್ತುವ ಉದ್ದೇಶದಿಂದ ತಾವು ಅವಿವಾಹಿತೆಯಾಗಿಯೇ ಇದ್ದಿರುವುದಾಗಿ ಬಿಎಸ್ ಪಿ ನಾಯಕಿ ಮಾಯಾವತಿ ತಿಳಿಸಿದ್ದಾರೆ.
ನಾನು ನನ್ನ ಸಂಪೂರ್ಣ ಜೀವನವನ್ನು ದೌರ್ಜನ್ಯಕ್ಕೊಳಗಾದವರ ಉದ್ಧಾರಕ್ಕಾಗಿ ಮೀಸಲಾಗಿರಿಸಿದ್ದೇನೆ. ಇದನ್ನು ಸಾಧಿಸುವುದಕ್ಕೋಸ್ಕರವೇ ನಾನು ಅವಿವಾಹಿತಳಾಗಿ ಉಳಿದೆ ಎಂದು ತಿಳಿಸಿದ್ದಾರೆ.
ಮಾಯಾವತಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ ನಾಯಕರ, ಪಕ್ಷದ ಚಿಹ್ನೆ ಆನೆ ಪ್ರತಿಮೆ ನಿರ್ಮಾಣಕ್ಕಾಗಿ 2 ಸಾವಿರ ಕೋಟಿ ವೆಚ್ಚ ಮಾಡಲಾಗಿದ್ದು, ಇದು ಜನರ ತೆರಿಗೆ ಹಣದ ದುರುಪಯೋಗ. ಆ ಹಣವನ್ನು ಅವರು ಮರು ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಯಾವತಿ ತಾವು ಸದಾ ಬಡವರ ಪರವಾಗಿದ್ದೇನೆ. ಅವರ ಏಳಿಗೆಗಾಗ್ಯೇ ತನ್ನ ಜೀವನ ಮುಡುಪಾಗಿಟ್ಟಿರುವುದಾಗಿ ಹೇಳುತ್ತಾ ಈ ಹೇಳಿಕೆ ನೀಡಿದ್ದಾರೆ.
ಪ್ರತಿಮೆ ನಿರ್ಮಾಣವನ್ನು ಸಮರ್ಥಿಸಿಕೊಂಡ ಅವರು ಜನರ ಇಚ್ಛೆಯಂತೆ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಗುರುಗಳ ಮತ್ತು ಸಮಾಜ ಸುಧಾರಕರ ಮೌಲ್ಯಗಳನ್ನು ಪ್ರಚಾರ ಮಾಡುವುದು ಇದರ ಉದ್ದೇಶವಾಗಿತ್ತು ಹೊರತು ಪಕ್ಷದ ಚಿಹ್ನೆಯನ್ನು ವೈಭವೀಕರಿಸುವ ಉದ್ದೇಶ ನಮ್ಮದಾಗಿರಲಿಲ್ಲ. ಸ್ಮಾರಕಗಳ ಮತ್ತು ಪ್ರತಿಮೆಗಳ ನಿರ್ಮಾಣಕ್ಕೆ ವಿಧಾನಸಭೆಯಲ್ಲಿ ಅನುಮತಿ ಪಡೆದ ಬಳಿಕ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಲಾಗಿತ್ತು ಎಂದಿದ್ದಾರೆ.
ಅಲ್ಲದೇ ಈ ಅರ್ಜಿ ರಾಜಕೀಯ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿದ್ದು, ಇದನ್ನು ವಜಾಗೊಳಿಸಿ ಎಂದು ಮನವಿ ಮಾಡಿದ್ದಾರೆ.