ಚೀನಾದಲ್ಲಿ ಪತ್ತೆಯಾಯ್ತು 2,500 ವರ್ಷ ಹಿಂದಿನ ಮೊಟ್ಟೆಗಳು!

ಬೀಜಿಂಗ್: ಪುರಾತತ್ವ ಶಾಸ್ತ್ರಜ್ಞರ ತಂಡವೊಂದು ಪೂರ್ವ ಚೀನಾದ ಶಾಂಗ್‍ಕ್ಸಿಂಗ್ ನಗರದಲ್ಲಿ ಸುಮಾರು 2,500 ವರ್ಷಗಳ ಹಿಂದಿನ ಮಣ್ಣಿನ ಮಡಿಕೆಯೊಳಗೆ ಇರಿಸಿದ ಸುಮಾರು 20 ಮೊಟ್ಟೆಗಳನ್ನು ಪತ್ತೆ ಮಾಡಿದ್ದಾರೆ.

ಚೀನಾದ ಶಾಂಗ್‍ಕ್ಸಿಂಗ್ ನಗರದಲ್ಲಿ ನ್ಯನ್ಜಿಂಗ್ ಪುರಾತತ್ವ ಸಂಸ್ಥೆ ಹಾಗೂ ಲಿಯಾಂಗ್ ಮ್ಯೂಸಿಯಂನ ತಜ್ಞರ ತಂಡ ಉತ್ಖನನ ಮಾಡಿ ಸಂಶೋದನೆ ನಡೆಸುತ್ತಿದ್ದರು. ಈ ವೇಳೆ ಮೊಟ್ಟೆಗಳು ಪತ್ತೆಯಾಗಿದೆ. ತಜ್ಞರ ಪ್ರಕಾರ ಸುಮಾರು 2,500 ವರ್ಷಗಳ ಹಿಂದೆಯಿದ್ದ ಮಾನವರು ಈ ಮೊಟ್ಟೆಗಳನ್ನು ಮಡಿಕೆಯಲ್ಲಿ ಕೂಡಿಟ್ಟು ಮಣ್ಣಿನೊಳಗೆ ಹೂತಿಟ್ಟಿದ್ದರು. ಮಡಿಕೆಯಲ್ಲಿ ಕ್ಯಾಲ್ಶಿಯಮ್ ಅಂಶ ಅಧಿಕವಾಗಿದ್ದ ಕಾರಣಕ್ಕೆ ಈ ಮೊಟ್ಟೆಗಳು ಒಡೆಯದೇ, ಮೊಟ್ಟೆಗಳ ಮೇಲಿನ ಪದರ ಹಸಿರು ಮತ್ತು ನೀಲಿ ಬಣ್ಣಕ್ಕೆ ತಿರುಗಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಕಾಲದಲ್ಲಿ ಮನುಷ್ಯ ಸಾವನ್ನಪ್ಪಿದರೇ ಆತನಿಗೆ ಸಂಬಂಧ ಪಟ್ಟ ವಸ್ತುಗಳನ್ನು ಮಣ್ಣಿನಲ್ಲಿ ಹೂತಿಡುತ್ತಿದ್ದರು. ಹಾಗೆಯೇ ಮೊಟ್ಟೆಗಳು ಪತ್ತೆಯಾದ ಸ್ಥಳದ ಮಾಲೀಕ ಸತ್ತ ನಂತರ ಆತನ ಆತ್ಮ ಮತ್ತೆ ಕಾಡಬಾರದು ಎಂಬ ಕಾರಣಕ್ಕೆ ಆತ ಬಳಕೆ ಮಾಡುತ್ತಿದ್ದ ವಸ್ತುಗಳ ಸಮೇತ ಆತನನ್ನು ಹೂಳಿರಬಹುದು ಎಂದು ಉತ್ಖನನ ನಡೆಸಿದ ತಜ್ಞರು ಊಹಿಸಿದ್ದಾರೆ. ಅಲ್ಲದೆ ಈ ಸ್ಥಳದಲ್ಲಿ ದೊರಕಿರುವ ಮೊಟ್ಟೆ ಹಾಗೂ ಇತರೇ ಪುರಾತನ ವಸ್ತುಗಳನ್ನು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ