ಹಾಸನ, ಏ.2-ನಾನು ಹಿಂದೂ ಅಲ್ವಾ…ನಾನು ಮುಸ್ಲಿಂ ಏನ್ರೀ… ಕ್ರಿಶ್ಚಿಯನ್ನ… ಹೀಗೆಂದು ಪ್ರಶ್ನಿಸಿದವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು.
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರ ಪ್ರಚಾರ ಆರಂಭಿಸುವ ಮುನ್ನ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಎಲಿಯೂರಿನ ದೇವೀರಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಚನ್ನರಾಯಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಹಿಂದೂ ರಾಷ್ಟ್ರ ಜಾರಿ ಮಾಡುವ ಪರೀಕ್ಷೆ ನಡೆಸಲಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಇಡೀ ರಾಷ್ಟ್ರವನ್ನೇ ಹಿಂದೂ ರಾಷ್ಟ್ರ ಮಾಡಬೇಕೆಂಬ ಕಲ್ಪನೆ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ನಾವು ಎಲ್ಲ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಪರಸ್ಪರ ಅನ್ಯೋನ್ಯವಾಗಿ ಬಾಳುವ ಒಂದು ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೆ ತರಬೇಕಿದೆ ಎಂದು ಅವರು ಹೇಳಿದರು.
ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಹತ್ಯೆಯಾದಾಗ ಮುಸ್ಲಿಮರು ಹೋರಾಟ ಮಾಡಲಿಲ್ಲವೇ? ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು. ಇವರೇನು ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆಯೇ ಎಂದು ಪ್ರಧಾನಿ ವಿರುದ್ದ ಟೀಕಾ ಪ್ರಹಾರ ಮಾಡಿದರು.
ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದುಕೊಟ್ಟ ಸಂವಿಧಾನವಿದ್ದು, ಅದನ್ನು ದೇಶದ 130 ಕೋಟಿ ಜನರು ಒಪ್ಪುತ್ತಾರೆ ಎನ್ನುವುದಾದರೆ ಈ ಚುನಾವಣೆಯಲ್ಲಿ ಹಿಂದೂ ರಾಷ್ಟ್ರದ ಪರೀಕ್ಷೆ ನಡೆಯಲಿ ಎಂದು ವಾಗ್ದಾಳಿ ನಡೆಸಿದರು.
ಕಾಶ್ಮೀರ ದೇಶದೊಂದಿಗೆ ಸೇರುವಾಗ ಕಲಂ 370 ಜಾರಿಗೆ ಬಂದಿತು. ಅಲ್ಲಿ ಬೌದ್ಧರು, ಮುಸ್ಲಿಮರು, ಹಿಂದೂಗಳು ಇದ್ದಾರೆ.ಆಗಿನ ವಾತಾವರಣವನ್ನು ನೋಡಿ ನಿರ್ಣಯ ಕೈಗೊಳ್ಳಲಾಗಿತ್ತು.370ನೇ ಕಲಂ ತಾವು ಕೊಟ್ಟಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ಕಾಂಗ್ರೆಸ್ -ಜೆಡಿಎಸ್ನ ಎಲ್ಲಾ ಮೈತ್ರಿ ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿಗಳನ್ನು ಮಣಿಸಿ ಗೆಲ್ಲಬೇಕೆಂಬುದೇ ನಮ್ಮ ಗುರಿ ಎಂದರು.
ನಮ್ಮ ಕುಲದೇವತೆ ತಾಯಿ ಪಾರ್ವತಿಗೆ ಪೂಜೆ ಮಾಡಿದ್ದೇವೆ. ಎಲಿಯೂರಿನಲ್ಲಿ ದೇವೀರಮ್ಮ, ಹರದನಹಳ್ಳಿಯಲ್ಲಿ ಈಶ್ವರ ದೇವರಿಗೆ ವರ್ಷಕ್ಕೆ ಎರಡು ಬಾರಿ ಬಂದು ಪೂಜೆ ಮಾಡುತ್ತೇವೆ. ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಬಂದು ಪೂಜೆ ಮಾಡುತ್ತಿಲ್ಲ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದು, ತಾವು ಬೇರೆ ಕೇತ್ರದಲ್ಲಿ ಸ್ಪರ್ಧಿಸಿರುವುದಕ್ಕೆ ಕಾರಣ ಬೇರೆ ಇದೆ ಎಂದು ಹೇಳಿದರು.