ಬೆಂಗಳೂರು, ಏ.2-ದೆಹಲಿ ಗದ್ದುಗೆ ಹಿಡಿಯಲು ಬಿಸಿಲಿನಲ್ಲಿ ಬೆವರಿಳಿಸುತ್ತಿರುವ ಮೂರು ರಾಜಕೀಯ ಪಕ್ಷಗಳಿಗೂ ಭಿನ್ನರ, ಅತೃಪ್ತ ನಾಯಕರ ಕಾಟವೇ ತೊಡರುಗಾಲಾಗುತ್ತಿದೆ.
ಚುನಾವಣೆ ಘೋಷಣೆಯಾದ ನಂತರ ಪ್ರಚಾರಕ್ಕೆ ಸಮಯ ಸಾಲುತ್ತಿಲ್ಲ. ಈ ನಡುವೆ ಟಿಕೆಟ್ ಹಂಚಿಕೆ ರಗಳೆಯನ್ನು ಸರಿಪಡಿಸಲು ಒಂದಷ್ಟು ಸರ್ಕಸ್ ಮಾಡಬೇಕಾಯಿತು. ಎಲ್ಲವನ್ನೂ ಸರಿಮಾಡಿ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಗಿದು, ಎರಡನೇ ಹಂತದ ಚುನಾವಣೆಗೂ ನಾಮಪತ್ರ ಸಲ್ಲಿಕೆ ಮುಕ್ತಾಯಗೊಳ್ಳುತ್ತಿರುವ ಹಂತದಲ್ಲಿ ಭಿನ್ನರ ಕಾಟ ತಲೆನೋವಾಗಿ ಪರಿಣಮಿಸಲಿದೆ.
ಕಣದಲ್ಲಿರುವ ಮೂರೂ ಪಕ್ಷಗಳಲ್ಲಿ ಬಂಡಾಯ, ಭಿನ್ನರ ಕಾಟ ಸಾಮಾನ್ಯವಾಗಿದೆ. ಕೆಲವರಂತೂ ಬಂಡಾಯವಾಗಿ ನಾಮಪತ್ರ ಸಲ್ಲಿಸಿ ಸಡ್ಡುಹೊಡೆದಿದ್ದರು.
ಹಿರಿಯ ನಾಯಕರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿ ನಾಮಪತ್ರ ವಾಪಸ್ ತೆಗೆಸಿದ್ದಾರೆ.ಆದರೆ ಅತೃಪ್ತ ನಾಯಕರುಗಳು ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡದೆ ಮುನಿಸಿಕೊಂಡಿದ್ದು, ದೊಡ್ಡ ಹೊಡೆತ ಬೀಳುತ್ತಿದೆ.
ಜೆಡಿಎಸ್ಗೆ ಆಂತರಿಕ ಬಂಡಾಯಕ್ಕಿಂತಲೂ ದೋಸ್ತಿ ಪಕ್ಷದ ಕಾಂಗ್ರೆಸ್ಸಿಗರ ಕಾಟ ಹೆಚ್ಚಾಗಿದೆ. ತುಮಕೂರಿನಿಂದ ದೇವೇಗೌಡರು ಕಣಕ್ಕಿಳಿದಾಗ ಕಾಂಗ್ರೆಸ್ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಬಂಡಾಯವಾಗಿ ಕಣಕ್ಕಿಳಿದಿದ್ದರು. ಈ ಇಬ್ಬರನ್ನು ಮನವೊಲಿಸಿ ನಾಮಪತ್ರ ವಾಪಸ್ ತೆಗೆಸುವಷ್ಟರಲ್ಲಿ ಕಾಂಗ್ರೆಸ್ ನಾಯಕರು ಹೈರಾಣಾಗಿ ಹೋಗಿದ್ದರು.
ಇನ್ನು ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧವಾಗಿ ಬಿಜೆಪಿ-ಕಾಂಗ್ರೆಸ್ ರಾಜಕೀಯ ವಿರೋಧಭಾಸಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡುತ್ತಿರುವುದು ವಿಪರ್ಯಾಸ. ರಾಜ್ಯಮಟ್ಟದ ನಾಯಕರು ಎಷ್ಟೇ ಎಚ್ಚರಿಕೆ ನೀಡಿದರೂ ಮಂಡ್ಯದ ಕೆಳಹಂತದ ಕಾಂಗ್ರೆಸ್ ಕಾರ್ಯಕರ್ತರು ಕ್ಯಾರೆ ಎನ್ನುತ್ತಿಲ್ಲ.
ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಸ್ಟಾರ್ ನಟರಾದ ದರ್ಶನ್, ಯಶ್ ಪ್ರಚಾರಕ್ಕೆ ಆಗಮಿಸಿದಾಗ ಕಾಂಗ್ರೆಸ್ -ಬಿಜೆಪಿ ಪಕ್ಷಗಳ ಬಾವುಟ ಹಿಡಿದ ಕಾರ್ಯಕರ್ತರು ಬಹಿರಂಗವಾಗಿಯೇ ಪ್ರಚಾರ ಮಾಡುತ್ತಿದ್ದಾರೆ.
ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ ವಿರುದ್ಧ ಅಸಮಾಧಾನಗಳು ಕೇಳಿಬಂದಿದ್ದು, ಸ್ಥಳೀಯ ನಾಯಕ ಮದನ್ ಎಂಬುವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಉತ್ತರ ಕನ್ನಡ ಕ್ಷೇತ್ರಕ್ಕೆ ಜೆಡಿಎಸ್ನಿಂದ ಅಭ್ಯರ್ಥಿಗಳೇ ಇರಲಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ಕ್ಷೇತ್ರವೇನೋ ಸಿಕ್ಕಿತ್ತು. ಆದರೆ ಅಭ್ಯರ್ಥಿಗಳೇ ಇಲ್ಲದಿದ್ದರಿಂದ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರನ್ನು ಜೆಡಿಎಸ್ ಚಿಹ್ನೆಯಡಿ ಕಣಕ್ಕಿಳಿಸಲಾಗಿದೆ. ಇದು ಜೆಡಿಎಸ್ನ ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಕಾಂಗ್ರೆಸ್ ಪಾಲಿನ ಕ್ಷೇತ್ರಗಳ ಪೈಕಿ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ್ಶಂಕರ್ ಪರವಾಗಿ ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡುತ್ತಿಲ್ಲ.
ಕೋಲಾರದಲ್ಲಿ 7 ಬಾರಿ ಸಂಸದರಾಗಿ 8ನೇ ಬಾರಿ ಗೆದ್ದು ದಾಖಲೆ ಬರೆಯಲು ಹೊರಟಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ನಾಯಕರು, ಶಾಸಕರು ಅಡ್ಡಗಾಲು ಹಾಕುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಸೋಲಿಸಬೇಕೆಂದು ಬಿಜೆಪಿಗಿಂತಲೂ ಸ್ವಪಕ್ಷೀಯರೇ ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ.
ಬಳ್ಳಾರಿ ಉಪಚುನಾವಣೆಯಲ್ಲಿ ಗೆದ್ದು ಎರಡನೇ ಅವಧಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಉಗ್ರಪ್ಪ ಅವರಿಗೆ ಜಿಲ್ಲೆಯ ರಾಜಕಾರಣದ ಒಳಬೇಗುದಿಗಳು ತೊಂದರೆ ಕೊಡುತ್ತಿವೆ. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಜೈಲಿನಲ್ಲಿದ್ದು, ಅವರ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೆಸಾರ್ಟ್ ಗಲಾಟೆಯಲ್ಲಿ ಪೆಟ್ಟು ತಿಂದು ಆಸ್ಪತ್ರೆ ಸೇರಿ ಈಗ ಸುಧಾರಿಸಿಕೊಂಡಿರುವ ಹೊಸಪೇಟೆ ಕ್ಷೇತ್ರದ ಶಾಸಕ ಆನಂದ್ಸಿಂಗ್ ಕೂಡ ಕಾಂಗ್ರೆಸ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಶಾಸಕ ನಾಗೇಂದ್ರ ಅವರು ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡೇ ಬರುತ್ತಿದ್ದಾರೆ.ಉಪಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರು.
ಡಿ.ಕೆ.ಶಿವಕುಮಾರ್ ಅಲ್ಲೇ ಠಿಕಾಣಿ ಹೂಡಿದ್ದರು.ಆದರೆ ಈ ಬಾರಿ ಡಿ.ಕೆ.ಶಿವಕುಮಾರ್ ಒಂದು ಬಾರಿ ಮಾತ್ರ ಭೇಟಿ ನೀಡಿ ವಾಪಸ್ ಬಂದಿದ್ದಾರೆ.
ದಾವಣಗೆರೆ ಮತ್ತು ಧಾರವಾಡಕ್ಕೆ ಇನ್ನು ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲೂ ದೋಸ್ತಿ ಪಕ್ಷಗಳ ನಡುವೆ ಅಸಮಾಧಾನದ ಹೊಗೆಯಾಡುತ್ತಿದೆ.
ಇತ್ತ ಬಿಜೆಪಿಯಲ್ಲೂ ಪರಿಸ್ಥಿತಿ ಸುಲಭವಾಗಿಲ್ಲ. ಶಾಸಕ ಉಮೇಶ್ ಜಾಧವ್ ಅವರ ರಾಜೀನಾಮೆ ಕೊಡಿಸಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿರುವ ಬಿಜೆಪಿಯವರಿಗೆ ಸ್ಥಳೀಯವಾಗಿ ಕೆ.ಬಿ.ಶಾಣಪ್ಪ, ಬಾಬು ರಾವ್ ಚಿಂಚನಸೂರ್ ಅವರುಗಳ ಅಸಮಾಧಾನ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇನ್ನು ಚಿಕ್ಕೋಡಿಯಿಂದ ಟಿಕೆಟ್ ಸಿಗದೆ ಇರುವುದರಿಂದ ಬೇಸರಗೊಂಡಿರುವ ರಮೇಶ್ಕತ್ತಿ ಹಾಗೂ ಉಮೇಶ್ಕತ್ತಿ ಅವರು ಸಂಧಾನಕ್ಕೆ ಮಣಿದಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ.ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೂ ಅಲ್ಲಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತಿದೆ.