ಸಾರ್ವಜನಿಕರು ಪೊಲೀಸರ ಕ್ಷೇಮಕ್ಕಾಗಿ ಚಿಂತಿಸಬೇಕು-ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್

ಬೆಂಗಳೂರು, ಏ.2-ಕೆಎಸ್‍ಆರ್‍ಪಿ ಪೆರೇಡ್ ಮೈದಾನದಲ್ಲಿಂದು ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್ ಅವರು, ಕಾನೂನು ಸುವ್ಯವಸ್ಥೆ ಹಾಳು ಮಾಡಲು ಸಮಾಜಘಾತುಕ ಶಕ್ತಿಗಳು ಕಾಯುತ್ತಿರುತ್ತವೆ.

ಪೊಲೀಸ್ ಇಲಾಖೆ ಮೈಯಲ್ಲಾ ಕಣ್ಣಾಗಿಟ್ಟು ಅತ್ಯಂತ ಎಚ್ಚರಿಕೆಯಿಂದ ಕಾಯುತ್ತರೆ.ಪ್ರಾಮಾಣಿಕವಾಗಿ ದಿನದ 24ಗಂಟೆ ನಮ್ಮೆಲ್ಲರ ಕ್ಷೇಮಕ್ಕಾಗಿ ದುಡಿಯುವ ಪೊಲೀಸರ ಬಗ್ಗೆ ಎಲ್ಲರೂ ಚಿಂತಿಸಬೇಕಾದ ಅಗತ್ಯವಿದೆ.ಇದಕ್ಕಾಗಿ ಇಂತಹ ಸಮಾರಂಭ ಏರ್ಪಡಿಸಿ ಜನಸಾಮಾನ್ಯರಿಗೆ ಮಾಹಿತಿ ನೀಡಿ ಪೊಲೀಸರು ಮತ್ತು ಜನರ ನಡುವಿನ ಸಂಬಂಧ ಬಲಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ನಿವೃತ್ತ ಪೊಲೀಸರ ಕುರಿತು ಇಲಾಖೆ ಕಾಳಜಿಯನ್ನು ಇಂತಹ ಸಮಾರಂಭದ ಮೂಲಕ ತೋರಿಸುತ್ತಿದೆ ಎಂದರು.

ತಾಂತ್ರಿಕತೆ ವೇಗವಾಗಿ ಬೆಳೆಯುತ್ತಿದ್ದೆ. ಆಧುನಿಕ ಸಮಾಜದ ವೇಗಕ್ಕೆ ಹೊಂದಿಕೊಳ್ಳಲು ನಾವು ಬಹಳ ಶ್ರಮವಹಿಸಬೇಕಿದೆ ಪೊಲೀಸರಿಗೆ ದ್ವಿಚಕ್ರ, ನಾಲ್ಕುಚಕ್ರ ವಾಹನಗಳು, ಆಧುನಿಕ ಸಲಕರಣೆಗಳನ್ನು ನೀಡಿ. ಅವರ ಕ್ಷಮತೆ ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಲಾಖೆ ಸಾಕಷ್ಟು ಪ್ರಗತಿ ಕಂಡಿದೆ ಎಂಬುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಸಾಕಷ್ಟು ಸಂಕೀರ್ಣ ಪ್ರಕರಣಗಳನ್ನು ಇಲಾಖೆ ಬೇಧಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ಶಿವರಸನ್ ಹಾಗೂ ಅವನ ಸಹಚರರು ಪ್ರಕರಣ, ಇತ್ತೀಚೆಗೆ ಗೌರಿಲಂಕೇಶ್ ಕೊಲೆ ಪ್ರಕರಣ ಬೇಧಿಸಿರುವ ಕರ್ನಾಟಕ ಪೊಲೀಸರದು ಹೆಮ್ಮೆಯ ಸಾಧನೆಯಾಗಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಘೋಷಣೆಯಾಗಿದೆ.ನಿಮ್ಮೆಲ್ಲರ ಶ್ರಮ, ಜವಾಬ್ದಾರಿ ಹೆಚ್ಚಿದೆ ಇಲಾಖೆಗೆ ಹಾಗೂ ರಾಜ್ಯಕ್ಕೆ ಕಳಂಕ ಬಾರದಂತೆ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಿಕೊಡುತ್ತೀರಿ ಎಂಬ ನಂಬಿಕೆ ನನಗಿದೆ, ಆಕ್ಷೇಪಕಾರಿ ಘಟನೆಗಳು ನಡೆಯದಂತೆ ನೋಡಿಕೊಂಡು ಶಾಂತಿಯುತ ಮತದಾನ ನಡೆಯಿತೆಂಬ ಹೆಸರು ಬರುವಂತೆ ಮಾಡುತ್ತೀರಿ ಎಂಬ ಭರವಸೆಯಿದೆ ಎಂದು ವಿಜಯಭಾಸ್ಕರ್ ಹೇಳಿದರು.

ಮತದಾರರು ರಾಜ್ಯದಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ ಅವರು ಜನರು ಪೊಲೀಸ್ ಧ್ವಜಗಳನ್ನು ಕೊಂಡುಕೊಂಡು ಪೊಲೀಸರಿಗೆ ಕಿಂಚಿತ್ತು ಧನಸಹಾಯ ನೀಡುವುದಲ್ಲದೆ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕೆಂದು ಕೋರಿದರು.

ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸುತ್ತಿರುವ ಎಲ್ಲ ಪೊಲೀಸರಿಗೂ ನಮ್ಮ ಬೆಂಬಲವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ಗೃಹರಕ್ಷಕದಳದ ಡಿಜಿಪಿ ಎಮ್.ಎನ್.ರೆಡ್ಡಿ. ಡಿಜಿಪಿಗಳಾದ ಎ.ಎಮ್.ಪ್ರಸಾದ್, ಕಿಶೋರ್‍ಚಂದ್ರ್,ಪ್ರವೀಣ್‍ಸೂದ್, ಮದನ್‍ಕುಮಾರ್‍ಗರ್ಗ್, ಕೆಎಸ್‍ಆರ್‍ಪಿ ಎಡಿಜಿಪಿ ಭಾಸ್ಕರ್‍ರಾವ್, ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಈ ಬಾರಿ ಮುಖ್ಯಮಂತ್ರಿಗಳ ಪದಕವನ್ನು ನೀಡಲಾಗಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ