ಬೆಂಗಳೂರು, ಏ.1- ಟಿಕೆಟ್ ಹಂಚಿಕೆ ಸಂಬಂಧ ಬೆಳಗಾವಿ ಬಿಜೆಪಿ ಘಟಕದಲ್ಲಿ ಉಂಟಾಗಿದ್ದ ಭಿನ್ನಮತ ಬಗೆಹರಿಸುವಲ್ಲಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿದ್ದಾರೆ.
ಇಂದು ಪಕ್ಷದ ಮುಖಂಡ ಹಾಗೂ ಶಾಸಕ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ, ಸಂಸದ ಸುರೇಶ್ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಲಕ್ಷ್ಮಣ್ ಸವದಿ, ಸ್ಥಳೀಯ ಶಾಸಕರು ಹಾಗೂ ಪದಾಧಿಕಾರಿಗಳ ಜತೆ ನಡೆಸಿದ ಸಂಧಾನ ಯಶಸ್ವಿಯಾಗಿದೆ.
ಇದರಿಂದಾಗಿ ಲೋಕಸಭೆ ಚುನಾವಣೆಗೂ ಮುನ್ನವೇ ಬಿಜೆಪಿಗೆ ಎದುರಾಗಿದ್ದ ಕಂಟಕ ಸದ್ಯಕ್ಕೆ ತಾತ್ಕಾಲಿಕವಾಗಿ ನಿವಾರಣೆಯಾಗಿದೆ. ಬೆಳಗಾವಿಯ ಕೆಎಲ್‍ಇ ಅತಿಥಿ ಗೃಹದಲ್ಲಿ ನಡೆದ ಸಂಧಾನ ಸಭೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆಗೆ ಬೆಂಬಲ ನೀಡುವುದಾಗಿ ಭಿನ್ನಮತ ಸಾರಿದ್ದ ಕತ್ತಿ ಸಹೋದರರು ಅಭಯ ಹಸ್ತ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಭಿನ್ನಮತ ಸಾರುವುದು ಇಲ್ಲವೆ ಪಕ್ಷ ಬಿಟ್ಟು ಹೋಗುವಂತಹ ತೀರ್ಮಾನ ಕೈಗೊಳ್ಳಬಾರದೆಂದು ಯಡಿಯೂರಪ್ಪ ಮಾಡಿಕೊಂಡ ಮನವಿಗೆ ಕತ್ತಿ ಸಹೋದರರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಒಂದು ಹಂತದಲ್ಲಿ ಯಡಿಯೂರಪ್ಪನವರ ಮಾತಿಗೂ ಕತ್ತಿ ಸಹೋದರರು ಬಗ್ಗುವ ಲಕ್ಷಣಗಳು ಕಾಣಲಿಲ್ಲ. ನಾವು ಬೇರೊಬ್ಬರಿಗೆ ಟಿಕೆಟ್ ನೀಡುವ ಹಂತಕ್ಕೆ ಬೆಳೆದಿದ್ದೇವೆ. ಈಗ ನಮಗೇ ಟಿಕೆಟ್ ಕೊಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ತಿರುಗಿಬಿದ್ದರು.
ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಚಿಕ್ಕೋಡಿ ಕ್ಷೇತ್ರದಿಂದ ರಮೇಶ್ ಕತ್ತಿಯವರ ಹೆಸರನ್ನು ಮಾತ್ರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಕೇಂದ್ರ ವರಿಷ್ಠರು ಕೂಡ ಇದೊಂದು ಬಾರಿ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಿದ್ದರು.
ಆದರೆ, ಕೊನೆ ಕ್ಷಣದಲ್ಲಿ ರಮೇಶ್ ಕತ್ತಿ ಬದಲು ಅಣ್ಣಾ ಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಲಾಗಿದೆ.ನಾನು ಕೊನೆ ಕ್ಷಣದವರೆಗೂ ನಿಮಗೇ ಟಿಕೆಟ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ.ಕೊನೆ ಕ್ಷಣದಲ್ಲಿ ಬದಲಾವಣೆಯಾಗಿರುವುದಕ್ಕೆ ನಾನು ಹೊಣೆಗಾರನಲ್ಲ. ಯಾವುದೇ ಕಾರಣಕ್ಕೂ ನೀವು ಪಕ್ಷ ಬಿಟ್ಟು ಇಲ್ಲವೆ ಭಿನ್ನಮತ ನಡೆಸಬಾರದು.
ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ.ಪಕ್ಷದಲ್ಲಿ ನಿಮಗೆ ಸೂಕ್ತ ಸ್ಥಾನಮಾನ ಸಿಗಲಿದೆ.
ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬಾರದೆಂದು ಬಿಎಸ್‍ವೈ ಮನವಿ ಮಾಡಿದರು.
ಅಂತಿಮವಾಗಿ ಎಲ್ಲರ ಮನವಿಗೆ ಕತ್ತಿ ಸಹೋದರರು ತಲೆಬಾಗಿ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರುವ ಅಭಯ ಹಸ್ತ ನೀಡಿದ್ದಾರೆ.