ಸಿಲಿಂಡರ್ ಸ್ಪೋಟದಲ್ಲಿ ತಾಯಿ-ಮಗಳು ಮೃತಪಟ್ಟ ಪ್ರಕರಣ-ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರನ್ನು ಭೇಟಿ ಮಾಡಿದ ಕುಟುಂಬಸ್ಥರು

ಬೆಂಗಳೂರು, ಏ.1- ರಣಂ ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ-ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೃತರ ಕುಟುಂಬಸ್ಥರು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಹಾಗೂ ಬಾಮಾ ಹರೀಶ್ ಅವರನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಮಾಡಿದ್ದಾರೆ.

ಮೃತ ಮಹಿಳೆ ಸುಮೈರಾಬಾನು ಅವರ ಕುಟುಂಬಸ್ಥರು ಇಂದು ವಾಣಿಜ್ಯ ಮಂಡಳಿ ಅಧ್ಯಕ್ಷರನ್ನು ಭೇಟಿ ಮಾಡಿ ತಮಗೆ ಅನ್ಯಾಯವಾಗಿದೆ.ಸೂಕ್ತ ಪರಿಹಾರ ಕಲ್ಪಿಸುವಂತೆ ಕೋರಿದರು.

ಈ ಘಟನೆ ನಡೆದು ಮೂರು ದಿನಗಳಾದರೂ ಚಿತ್ರದ ಯಾರೊಬ್ಬರು ಈ ಬಗ್ಗೆ ಕ್ರಮ ವಹಿಸಿಲ್ಲ. ನಾವು ನಮ್ಮ ಕುಟುಂಬದವರನ್ನೇ ಕಳೆದುಕೊಂಡಿದ್ದೇವೆ. ಆದರೂ ಚಿತ್ರತಂಡವಾಗಲಿ ಯಾರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ನಿನ್ನೆಯಷ್ಟೇ ಬಾಗಲೂರು ಪೊಲೀಸ್ ಠಾಣೆ ಸಮೀಪದ ಮೊಬೈಲ್ ಟವರ್ ಏರಿದ್ದ ಸಂಬಂಧಿಕರು ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.

ಈ ಸಂಬಂಧ ಇದುವರೆಗೂ ಯಾರನ್ನು ಬಂಧಿಸಿಲ್ಲ. ಕೂಡಲೇ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ವಾಣಿಜ್ಯ ಮಂಡಳಿಗೆ ಮನವಿ ಮಾಡಿದರು.

ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ ರಣಂ ಚಿತ್ರವನ್ನು ಸಮುದ್ರ ನಿರ್ದೇಶನ ಮಾಡುತ್ತಿದ್ದು, ಆ ದಿನಗಳು ಖ್ಯಾತಿಯ ಚೇತನ್ ಹಾಗೂ ಚಿರಂಜೀವಿ ಸರ್ಜಾ ತಾರಾಗಣವಿದೆ.

ಚಿತ್ರದ ಕ್ಲೈಮಾಕ್ಸ್ ದೃಶ್ಯ ಚಿತ್ರೀಕರಣದ ವೇಳೆ ಕಾರ್ ಬ್ಲಾಸ್ಟ್‍ಗೆ ಬಳಸುವ ಹೈಡ್ಯಾಲಿಕ್ ಸಿಲಿಂಡರ್ ಸ್ಫೋಟಗೊಂಡು ತಬ್ರೈಜ್ ಖಾನ್ ಅವರ ಪತ್ನಿ ಸುಮೈರಾಬಾನು ಹಾಗೂ ಅವರ ಮಗಳು ಮೃತಪಟ್ಟಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ