ಡಾ.ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸಿದ ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು,ಏ.1- ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವ ಕಲಬುರಗಿ ಜಿಲ್ಲೆ ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ನೀಡಿದ್ದ ರಾಜೀನಾಮೆಯನ್ನು ಕೊನೆಗೂ ಸ್ಪೀಕರ್ ಅಂಗೀಕರಿಸಿದ್ದಾರೆ.

ಇದರಿಂದಾಗಿ ಜಾಧವ್‍ಗೆ ಎದುರಾಗಿದ್ದ ಬಹುದೊಡ್ಡ ಕಂಟಕ ನಿವಾರಣೆಯಾಗಿದೆ. ಪ್ರಸ್ತುತ ಅವರು ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಮಾ.4ರಂದು ಉಮೇಶ್‍ಜಾಧವ್ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜಾಧವ್ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕೇಂದ್ರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ವತಿಯಿಂದ ಸ್ಪೀಕರ್‍ಗೆ ದೂರು ನೀಡಲಾಗಿತ್ತು.

ಯಾವುದೇ ಕಾರಣಕ್ಕೂ ಉಮೇಶ್ ಜಾಧವ್ ರಾಜೀನಾಮೆಯನ್ನು ಅಂಗೀಕಾರ ಮಾಡಲೇಬಾರದು. ಶಾಸಕರಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಶಾಸಕ ಸ್ಥಾನವನ್ನು ಅನರ್ಹಗೊಳಿಸುವಂತೆ 32 ಪುಟಗಳ ಲಿಖಿತ ದೂರು ಸಲ್ಲಿಸಿತ್ತು.

ಆದರೆ ಕಾಂಗ್ರೆಸ್ ನೀಡಿದ್ದ ದೂರನ್ನು ಸ್ಪೀಕರ್ ಪರಿಗಣಿಸಿಲ್ಲ ಎಂಬುದು ಅವರ ತೀರ್ಮಾನದಿಂದಲೇ ಸ್ಪಷ್ಟವಾಗುತ್ತಿದೆ. ಉಮೇಶ್ ಜಾಧವ್ ಜೊತೆಗೆ ಶಾಸಕರಾದ ರಮೇಶ್ ಜಾರಕಿಹೊಳಿ(ಗೋಕಾಕ್), ಬಿ.ನಾಗೇಂದ್ರ(ಬಳ್ಳಾರಿ ಗ್ರಾಮಾಂತರ) ಹಾಗೂ ಮಹೇಶ್ ಕುಮಟಳ್ಳಿ(ಅಥಣಿ) ಅವರುಗಳ ಸದಸ್ಯತ್ವವನ್ನು ಅನರ್ಹ ಮಾಡಬೇಕೆಂದು ಒತ್ತಾಯಿಸಲಾಗಿತ್ತು.

ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರಕ್ಕೆ ಸ್ಪಷ್ಟನೆ ನೀಡಿರುವ ಸ್ಪೀಕರ್ ರಮೇಶ್‍ಕುಮಾರ್ ಅವರು ತಮ್ಮನ್ನು ಅನರ್ಹಗೊಳಿಸುವ ಕುರಿತಂತೆ ಜಾಧವ್ ವಕೀಲರ ಮೂಲಕ ನನಗೆ ನೀಡಿರುವ ಉತ್ತರ ಸಮರ್ಪಕವಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅನರ್ಹ ಅರ್ಜಿಗೆ ನೀಡಿರುವ ಉತ್ತರಕ್ಕೂ ನನ್ನ ಕಾರ್ಯಲಯದಿಂದ ರಾಜೀನಾಮೆ ಪತ್ರಕ್ಕೆ ಸಂಬಂಧಿಸಿದಂತೆ ನೀಡಿದ ಸೂಚನಾಪತ್ರಕ್ಕೆ ನೀಡುವ ಉತ್ತರಕ್ಕೂ ಸಾಮ್ಯತೆ ಕಂಡುಬರುವುದಿಲ್ಲ. ಈ ಹಿನ್ನೆಲೆಯಲ್ಲಿ ನಾನು ಕೇಳಿರುವ ಸ್ಪಷ್ಟನೆಗೆ ಪೂರ್ಣ ಪ್ರಮಾಣ ಪತ್ರದೊಂದಿಗೆ ಸ್ಪಷ್ಟೀಕರಣ ನೀಡಿರುವುದರಿಂದ ರಾಜೀನಾಮೆಯನ್ನು ಅಂಗೀಕರಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

2ನೇ ಬಾರಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನಾನೇ ನೋಟಿಸ್ ನೀಡಿದ್ದೆ. ಅಲ್ಲದೆ ಚಿಂಚೋಳಿ ಮತಕ್ಷೇತ್ರದಿಂದ ಆಗಮಿಸಿದ್ದ ಕೆಲವು ಸಂಘಸಂಸ್ಥೆಗಳು ಮತ್ತು ಮತದಾರರ ಸಮ್ಮುಖದಲ್ಲೇ ನೀವು ಜಾಧವ್ ಅವರನ್ನು ಅನರ್ಹಗೊಳಿಸುವುದು ನ್ಯಾಯಸಮ್ಮತವಾದುದಲ್ಲ. ಇದು ಪ್ರಜಾ ವಿರೋಧಿಯಾಗಿರುತ್ತದೆ.

ಇದಕ್ಕೆ ಕ್ಷೇತ್ರದ ಮತದಾರರ ಬೆಂಬಲ ಇರುವುದಿಲ್ಲ ಎಂದು ಖುದ್ದು ನನ್ನ ಮುಂದೆ ಹೇಳಿದ್ದಾರೆ.

ನನ್ನ ಆತ್ಮಸಾಕ್ಷಿಗೆ ವಿರುದ್ದವಾಗಿ ನಾನು ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಗಳ ನಿಯಮಾವಳಿಗಳ 202ರ ಪ್ರಕಾರ ನಿಗದಿತ ನಮೂನೆಯಲ್ಲಿ ಸ್ಪಷ್ಪೀಕರಣ ನೀಡಿರುವುದರಿಂದ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ.

ನಾನು ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎಂದು ಜಾಧವ್ ಹೇಳಿರುವುದರಿಂದ ಭಾರತದ ಸಂವಿಧಾನ ಅನುಚ್ಛೇಧ 190/3ಬಿ ನಿಯಮದ ಪ್ರಕಾರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ