ಪ್ರತಿಯೊಬ್ಬರು ಕಡ್ಡಾಯವಾಗಿ ವಿವೇಚನೆಯಿಂದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು-ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್

ಬೆಂಗಳೂರು, ಏ.1- ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನಂದು ತಪ್ಪದೇ ಕಡ್ಡಾಯವಾಗಿ ವಿವೇಚನೆಯಿಂದ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ರಾಜ್ಯ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾರ್ಚ್ ಆಫ್ ಕರ್ನಾಟಕ ಮತ್ತು ವಾರ್ತಾ ಜಾನಪದ ಎಂಬ ಚುನಾವಣೆ ಕುರಿತ ಎರಡು ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶದ ಹಿತದೃಷ್ಟಿ, ಸರ್ಕಾರ ನಡೆಸುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿಸುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕು.

ಪ್ರಜಾಪ್ರಭುತ್ವದಲ್ಲಿ ಮತದಾನ ಎನ್ನುವುದು ಹಬ್ಬವಿದ್ದಂತೆ.ಐದು ವರ್ಷಕ್ಕೊಮ್ಮೆ ಬರುವ ಮತದಾನ ಒಂದು ಪರೀಕ್ಷೆ ಇದ್ದಂತೆ.ಪರೀಕ್ಷೆಯ ದಿನವನ್ನು ಪ್ರವಾಸ ಮತ್ತಿತರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳದೆ ವಿವೇಚನೆಯಿಂದ ಮತದಾನ ಮಾಡಿ ಎಂದ ಅವರು, ಮತದಾನ ಎನ್ನುವುದು ಹಕ್ಕು ಮಾತ್ರವಲ್ಲ ಕರ್ತವ್ಯವೆಂದು ಭಾವಿಸಿ ಪ್ರಜಾಪ್ರಭುತ್ವ ಜಯಶೀಲವಾಗಲು ನಾವು ಮತದಾನ ಮಾಡಬೇಕು ಎಂದು ಕರೆ ನೀಡಿದರು.

ದೇಶದ ಆಗುಹೋಗುಗಳು, ಬಜೆಟ್, ನಡವಳಿಕೆ ಎಲ್ಲವಕ್ಕೂ ಸಂವಿಧಾನವೇ ಮೂಲ. ಹೀಗಾಗಿ ಜನಸಾಮಾನ್ಯರು ಸಂವಿಧಾನದ ಬಗ್ಗೆ ಅರಿಯಬೇಕು.ಸಂವಿಧಾನವನ್ನು ಹೆಚ್ಚು ತಿಳಿದಷ್ಟು ಜ್ಞಾನ ವೃದ್ಧಿಯಾಗುತ್ತದೆ ಎಂದರು.

ಪತ್ರಕರ್ತ ಅರಕೆರೆ ಜಯರಾಮ್ ಮಾತನಾಡಿ, ಶಿಕ್ಷಣ, ಆರೋಗ್ಯ, ರಾಜಕಾರಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಾರಿಕರಣವೇ ಹೆಚ್ಚಾಗುತ್ತಿದೆ. ಸಾಮಾನ್ಯ ಜನರು ಚುನವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುವಂತಾಗಬೇಕು ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಬೃಂಗೇಶ್, ಜಂಟಿ ನಿರ್ದೇಶಕ ಎ.ಆರ್.ಪ್ರಕಾಶ್, ಪತ್ರಕರ್ತ ಪದ್ಮರಾಜ ದಂಡಾವತಿ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ