ಬೆಂಗಳೂರು,ಏ.1- ಎರಡನೇ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಜೆಡಿಎಸ್-ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿಯಿಂದಾಗಿ ಕಾಂಗ್ರೆಸ್ ಪಾಲಿಗೆ ದಕ್ಕಿರುವ 21 ಕ್ಷೇತ್ರಗಳ ಪೈಕಿ 19 ಕ್ಷೇತ್ರತಳಿಗೆ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದೆ.
ಧಾರವಾಡ ಹೊರತುಪಡಿಸಿ ಒಟ್ಟು 20 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಘೋಷಣೆಯಾಗಿದ್ದು, ದಾವಣಗೆರೆಯ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ಶಾಸಕ ಶಾಮನೂರು ಶಿವಶಂಕರಪ್ಪನವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಹೀಗಾಗಿ ಧಾರವಾಡ ಮತ್ತು ದಾವಣಗೆರೆ ಈ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ನೆನೆಗುದಿಗೆ ಬಿದ್ದಿದೆ. ಹಾವೇರಿಯಲ್ಲಿ ಅಲ್ಪಸಂಖ್ಯಾತರಿಗೆ ಈ ಬಾರಿ ಟಿಕೆಟ್ ನೀಡದೇ ಇರುವುದರಿಂದ ಧಾರವಾಡದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದೆ.
ಮಾಜಿ ಸಚಿವ ವಿನಯ್ಕುಲಕರ್ಣಿ, ಸದಾನಂದ ಡಂಗಣ್ಣನವರ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರಾದ ಐ.ಜಿ.ಸನದಿ ಅವರ ಪುತ್ರ ಸಾಕೀರ್ ಸನದಿ ಅವರ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ.
ಕಾಂಗ್ರೆಸ್ ನಾಯಕರು ವಿನಯ್ಕುಲಕರ್ಣಿ ಅಥವಾ ಸಾಕೀರ್ ಸನದಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದೆ.ಇಂದು ಸಂಜೆಯೊಳಗೆ ಧಾರವಾಡ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ.
ಇನ್ನು ದಾವಣಗೆರೆಯಲ್ಲಿ ಸ್ಪರ್ಧಿಸಲು ಶಾಮನೂರು ಶಿವಶಂಕರಪ್ಪ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಿತ್ತು.ಅವರು ಕೂಡ ಸ್ಪರ್ಧೆಯಿಂದ ಹಿಂದೇಟು ಹಾಕಿರುವುದರಿಂದ ಈಗ ಮಂಜಪ್ಪ ಎಂಬುವರ ಹೆಸರು ಚಾಲ್ತಿಯಲ್ಲಿದೆ.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಂಜಪ್ಪ ಉಪಸಮುದಾಯಕ್ಕೆ ಸೇರಿರುವುದರಿಂದ ಅವರನ್ನು ಕಣಕ್ಕಿಳಿಸಲು ಸಿದ್ದರಾಮಯ್ಯ ಒಲವು ತೋರಿದ್ದಾರೆ. ಅಲ್ಲದೆ ಮಾಜಿ ಸಚಿವ ಎಚ್.ಎಂ.ರೇವಣ್ಣ , ಸೇರಿದಂತೆ ಹಲವಾರು ಮಂದಿ ದಾವಣಗೆರೆ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಇಂದು ಅಥವಾ ನಾಳೆಯೊಳಗೆ ತಿಳಿದುಬರಲಿದೆ.