ನೆಲಮಂಗಲ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ರಾಜ್ಯದಲ್ಲಿ ಅಖಾಡಕ್ಕಿಳಿಯಲು ನಿರ್ಧರಿಸಿರುವ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಇಂದು ಬೆಂಗಳೂರಿನ ನೆಲಮಂಗಲದಲ್ಲಿ ಮೈತ್ರಿ ಪಕ್ಷದ ಬೃಹತ್ ಸಮಾವೇಶ ಏರ್ಪಡಿಸಿವೆ. ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ.
ಇಂದು ಸಂಜೆ 4 ಗಂಟೆಗೆ ನೆಲಮಂಗಲ ಸಮೀಪದ ಮಾದಾವರದ ಬಿಐಇಸಿ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಹೆಲಿಪ್ಯಾಡ್ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್, ಎಚ್.ಡಿ. ರೇವಣ್ಣ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ, ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ.
ಮೈತ್ರಿ ಪಕ್ಷಗಳ ಬೃಹತ್ ಸಮಾವೇಶದಲ್ಲಿ ಸುಮಾರು 5 ಲಕ್ಷ ಜೆಡಿಎಸ್ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಇನ್ನು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರೂ ದೌಡಾಯಿಸುವ ಸಾಧ್ಯತೆಯಿದೆ. ಹೀಗಾಗಿ, ಬೆಂಗಳೂರು ಗ್ರಾಮಾಂತರ ಎಸ್.ಪಿ. ರಾಮ್ ನಿವಾಸ್ ಸಪೆಟ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಭದ್ರತೆಗೆ ಸುಮಾರು 2,000 ಪೊಲೀಸರ ನಿಯೋಜನೆ ಮಾಡಲಾಗಿದೆ. 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಯಕರ್ತರನ್ನು ಸೇರಿಸುವ ಜವಾಬ್ದಾರಿ:
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದಲ್ಲಿ ನಡೆಯಲಿರುವ ಐತಿಹಾಸಿಕ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಜನ ಸೇರಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಗ್ರಾಮಾಂತರ ಹಾಗೂ ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಶಾಸಕರಿಗೆ ಕನರನ್ನು ಸೇರಿಸುವ ಟಾಸ್ಕ್ ನೀಡಲಾಗಿದೆ. ಒಬ್ಬ ಶಾಸಕ ಕನಿಷ್ಠ 10 ಸಾವಿರ ಜನರನ್ನು ಸೇರಿಸಬೇಕೆಂಬ ಷರತ್ತು ಹಾಕಲಾಗಿದೆ ಎಂದು ಹೇಳಲಾಗಿದೆ. ಎರಡೂ ಪಕ್ಷಗಳಿಂದ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸೇರಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿಎಂ ಕುಮಾರಸ್ವಾಮಿಯವರಿಂದು ಸೂಚನೆ ಹೋಗಿದೆ ಎನ್ನಲಾಗಿದೆ.
ಟ್ರಾಫಿಕ್ ಜಾಮ್ ಹಿನ್ನೆಲೆ ಮಾರ್ಗ ಬದಲಾವಣೆ:
ಇಂದು ನಡೆಯಲಿರುವ ಸಮಾವೇಶಕ್ಕೆ ಲಕ್ಷಾಂತರ ಕಾರ್ಯಕರ್ತರು ಸೇರುವ ಸಾಧ್ಯತೆ ಇರುವುದರಿಂದ ಟ್ರಾಫಿಕ್ ಜಾಮ್ ಆಗಲಿದೆ. ಹೀಗಾಗಿ, ಭಾರೀ ವಾಹನಗಳ ಮಾರ್ಗ ಬದಲಾವಣೆಯಾಗಲಿದೆ. ಇಂದು ರಾತ್ರಿ 10 ಗಂಟೆವೆರೆಗೂ ಮಾರ್ಗ ಬದಲಾವಣೆ ಮಾಡಲಾಗಿದೆ.
ತುಮಕೂರು–ಬೆಂಗಳೂರು–ಹೊಸೂರು ಮಾರ್ಗದಲ್ಲಿ ಸಂಚರಿಸುವವರು
ತುಮಕೂರು – ಡಾಬಸ್ಪೇಟೆ – ಮಾಗಡಿ – ಮಾಗಡಿರೋಡ್ – ಬೆಂಗಳೂರು, ತುಮಕೂರು – ಡಾಬಸ್ಪೇಟೆ – ಮಾಗಡಿ – ಮಾಗಡಿರೋಡ್ – ನೈಸ್ ರೋಡ್ – ಹೊಸೂರು ಮಾರ್ಗವಾಗಿ ತೆರಳಬೇಕು.
ತುಮಕೂರು– ಬೆಂಗಳೂರು ದೇವನಹಳ್ಳಿ ಮಾರ್ಗದಲ್ಲಿ ಹೋಗುವ ಪ್ರಯಾಣಿಕರು
ತುಮಕೂರು – ಡಾಬಸ್ಪೇಟೆ – ದೊಡ್ಡಬಳ್ಳಾಪುರ – ದೇವನಹಳ್ಳಿ ಮಾರ್ಗದಲ್ಲಿ ಹೋಗಬೇಕು.
ಹೊಸೂರು ತುಮಕೂರು ಮಾರ್ಗದ ಪ್ರಯಾಣಿಕರು
ಹೊಸೂರು – ಎಲೆಕ್ಟ್ರಾನಿಕ್ ಸಿಟಿ ನೈಸ್ ರೋಡ್ – ಮಾಗಡಿ ರೋಡ್ ನೈಸ್ ರೋಡ್ – ಮಾಗಡಿ – ಡಾಬಸ್ಪೇಟೆ – ತುಮಕೂರು ಮಾರ್ಗವಾಗಿ ಹೋಗಬೇಕು.
ಎಲ್ಲೆಲ್ಲಿ ಟ್ರಾಫಿಕ್ ಜಾಮ್?:
ನಗರದ ಏರ್ಪೋರ್ಟ್ ರಸ್ತೆ ಹಾಗೂ ರಿಂಗ್ ರಸ್ತೆಯಲ್ಲಿ ಇಂದು ಟ್ರಾಫಿಕ್ ಜಾಮ್ ಹೆಚ್ಚಾಗಲಿದೆ. ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರದಿಂದ ಸಮಾವೇಶಕ್ಕೆ ಕಾರ್ಯಕರ್ತರ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಹೆಬ್ಬಾಳ ಜಂಕ್ಷನ್, ಟಿನ್ ಫ್ಯಾಕ್ಟರಿ ಜಂಕ್ಷನ್, ಗೊರಗುಂಟೆಪಾಳ್ಯದಲ್ಲಿ ಟ್ರಾಫಿಕ್ ಕಿರಿಕಿರಿ ಹೆಚ್ಚಾಗಲಿದೆ.