ಬೆಂಗಳೂರು, ಮಾ.30-ಪ್ರತಿ ಬೇಸಿಗೆಗಿಂತ ಈ ಬಾರಿ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವಿಶೇಷ ಸಭೆ ಹಮ್ಮಿಕೊಂಡು ಚರ್ಚೆ ನಡೆಸಲಾಯಿತು.
ವಿಪರ್ಯಾಸವೆಂದರೆ ಅತ್ಯಗತ್ಯವಾಗಿ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲೆಂದೇ ಕರೆಯಲಾದ ಈ ಸಭೆಗೆ ಬಹಳಷ್ಟು ಸದಸ್ಯರು ಗೈರು ಹಾಜರಾಗಿದ್ದರು.
ಸಭೆ ಪ್ರಾರಂಭವಾಗುತ್ತಿದ್ದಂತೆ ಎಸ್.ಎಸ್.ಶಿವಳ್ಳಿ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ಗೆ ಸಂತಾಪ ವ್ಯಕ್ತಪಡಿಸಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ನಂತರ ಮುಂದುವರೆದ ಸಭೆಯಲ್ಲಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿ ನಗರದಲ್ಲಿ ಸಾಕಷ್ಟು ನೀರಿನ ಸಮಸ್ಯೆ ಕಾಡುತ್ತಿದೆ.
ಎಲ್ಲೆಲ್ಲಿ ತೀವ್ರ ತೊಂದರೆ ಇದೆಯೋ ಅಲ್ಲಿ ಕೊಳವೆ ಬಾವಿ ಹಾಕುವುದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದಾಗಿ ಹೇಳಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಬಿಬಿಎಂಪಿಯ 198 ವಾರ್ಡ್ಗಳ ಸದಸ್ಯರು ಒಗ್ಗಟ್ಟಾಗಿ ನೀರಿನ ಸಮಸ್ಯೆ ಕುರಿತು ದನಿ ಎತ್ತಬೇಕು. ಕೇವಲ ಸಭೆ ನಡೆಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನೀರು ಪೂರೈಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನುಷ್ಯನಿಗೆ ಬದುಕಲು ಉತ್ತಮ ಗಾಳಿ, ನೀರು ಅವಶ್ಯವಿದೆ. ನಗರದಲ್ಲಿ ಭೀಕರ ನೀರಿನ ಸಮಸ್ಯೆ ಉದ್ಭವವಾಗಿದ್ದರೂ ಕೆಆರ್ಎಸ್ನಲ್ಲಿ ನೀರಿದ್ದರೂ ಜಲಮಂಡಳಿ ನೀರು ಕೊಡಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೂನ್ವರೆಗೆ ಮಳೆ ಬರದಿದ್ದರೂ ನೀರು ಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಆ ಕೆಲಸ ಆಗುತ್ತಿಲ್ಲ. ಟ್ಯಾಂಕರ್ಗಳ ಮೂಲಕವೂ ನೀರು ಒದಗಿಸುತ್ತಿಲ್ಲ. ಕೊಳವೆ ಬಾವಿಗಳನ್ನು ಹಾಕಲು 4ಜಿ ವಿನಾಯಿತಿ ಕೂಡ ನೀಡಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನ ಕೊಳವೆ ಬಾವಿಗಳನ್ನು ಕೊರೆಸಿದ್ದರೆ ಹೀಗೆ ಸಮಸ್ಯೆಉದ್ಭವವಾಗುತ್ತಿರಲಿಲ್ಲ. ಈಗಲಾದರೂ ಜಲಮಂಡಳಿ ಅಧಿಕಾರಿಗಳು ಬೆಸ್ಕಾಂ ಜೊತೆ ಮಾತನಾಡಿಕೊಂಡು ನೀರು ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಲಮಂಡಳಿ, ಬೆಸ್ಕಾಂ, ಬಿಬಿಎಂಪಿ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಇನ್ನು ಎರಡೂವರೆ ತಿಂಗಳು ಬಿರುಬೇಸಿಗೆ ಇರಲಿದೆ. ನೀರಿನ ಸಮಸ್ಯೆಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಈಗಾಗಲೇ ನಗರದಲ್ಲಿ ಹಲವು ಕಡೆ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಜನಪ್ರತಿನಿಧಿಗಳಾಗಿ ನಾವು ಜನರಿಗೆ ಏನು ಉತ್ತರ ಕೊಡುವುದು? ನೀರು ಕೊಡದೆ ಹೇಗೆ ಮುಖ ತೋರಿಸುವುದು? ಜನರಿಗೆ ಚುನಾವಣೆ, ನೀತಿ ಸಂಹಿತೆ ಇವೆಲ್ಲ ಬೇಕಾಗಿಲ್ಲ. ಅವರಿಗೆ ಬೇಕಿರುವುದು ಕುಡಿಯುವ ನೀರು. ಅದನ್ನು ಮೊದಲು ಕೊಡಿ ಎಂದು ಹೇಳಿದರು.
ಟ್ಯಾಂಕರ್ಗಳಲ್ಲಿ ನೀರು ಕೊಡುವುದಾಗಿ ಹೇಳುತ್ತೀರಿ. ಟ್ಯಾಂಕರ್ಗಳೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲೇ ಹೀಗಾದರೆ 110 ಹಳ್ಳಿಗಳ ಜನಪ್ರತಿನಿಧಿಗಳ ಗತಿಯೇನು? ಬೇಸಿಗೆಗೂ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು ಎಂದರು.
ಟ್ಯಾಂಕರ್ಗಳಲ್ಲಿ ನೀರು ಕೊಡಲು ಇನ್ನು ಟೆಂಡರ್ ಫೈನಲ್ ಆಗಿಲ್ಲ. ಮತ್ತೆ ಯಾವಾಗ ನೀರು ಕೊಡುತ್ತೀರ? ಆಯುಕ್ತರೇ ಇದನ್ನು ಹೇಗೆ ನಿರ್ವಹಿಸುತ್ತೀರಿ ಉತ್ತರ ಕೊಡಿ ಎಂದು ಪದ್ಮನಾಭರೆಡ್ಡಿ ಆಗ್ರಹಿಸಿದರು.
ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ಇದ್ದರೆ ನಗರದ ಜನ ನಮ್ಮನ್ನು ರಸ್ತೆಗಳಲ್ಲಿ ಓಡಾಡಲು ಬಿಡಲ್ಲ ಎಂದು ಎಚ್ಚರಿಸಿದರು.
ಮುಂದುವರೆದು ಮಾತನಾಡಿದ ಪದ್ಮನಾಭರೆಡ್ಡಿ, ಬಿಬಿಎಂಪಿ ಕೌನ್ಸಿಲ್ ನಿರ್ಣಯಕ್ಕೆ ವಿರುದ್ಧವಾಗಿ ಜಾಹೀರಾತು ಬೈಲಾ ತಿದ್ದುಪಡಿ ಮಾಡಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುಂದಾಗಿದ್ದಾರೆ ಎಂದು ಹೇಳಿದಾಗ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ನೀತಿ ಸಂಹಿತೆ ಇರುವಾಗ ಇದರ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ. ಇಂದು ಯಾವ ಉದ್ದೇಶಕ್ಕೆ ಕೌನ್ಸಿಲ್ಸಭೆ ಕರೆಯಲಾಗಿದೆಯೋ ಆ ಸಮಸ್ಯೆ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪದ್ಮನಾಭರೆಡ್ಡಿ, ಕಳೆದ ವಾರ ಜಾಹೀರಾತು ಬೈಲಾ ತಿದ್ದುಪಡಿ ಮಾಡಲು ಅದು ಯಾವ ರೀತಿ ನಿರ್ಣಯ ಮಾಡಿದಿರಿ. ಆಗ ನೀತಿ ಸಂಹಿತೆ ಇರಲಿಲ್ಲವಾ? ಒಂದು ವೇಳೆ ಜಾಹೀರಾತು ಮಾಫಿಯಾಗೆ ಅವಕಾಶ ಮಾಡಿಕೊಡಲು ಮುಂದಾದರೆ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.
ಮಾಜಿ ಮೇಯರ್ ಮಂಜುನಾಥರೆಡ್ಡಿ ಮಾತನಾಡಿ, ನಮ್ಮ ಏರಿಯಾದಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ. ಪ್ರತಿನಿತ್ಯ ಜನರಿಂದ ದೂರುಗಳು ಬರುತ್ತಲೇ ಇವೆ.
ಜಲಮಂಡಳಿ ಸಾರ್ವಜನಿಕರಿಂದ ಲಕ್ಷಾಂತರ ರೂ. ಪ್ರೊರೆಟಾ ಶುಲ್ಕ ಸಂಗ್ರಹ ಮಾಡುತ್ತಿದೆ. ನೀರು ಕೊಡಲು ಏಕೆ ಹಿಂದೇಟು ಹಾಕುತ್ತದೆ. ಆಯುಕ್ತರು ಈ ಬಗ್ಗೆ ಗಮನ ಹರಿಸಿ ಜಲಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.
ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿಯಿಂದ ಬಹಳ ಸಮಸ್ಯೆಯಾಗುತ್ತಿದೆ. ಸತತ ಟ್ರಾಫಿಕ್ಜಾಮ್ನಿಂದ ಜನ ಬೇಸತ್ತಿದ್ದಾರೆ. ಬಿಎಂಆರ್ಸಿಎಲ್ನವರು ರಸ್ತೆಯನ್ನೆಲ್ಲ ಒಡೆದು ಹಾಳು ಮಾಡಿದ್ದಾರೆ. ಈ ಕಾಮಗಾರಿ ಮುಗಿಯುವವರೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮಾತನಾಡಿ, ಜಲಮಂಡಳಿ, ಬೆಸ್ಕಾಂ, ಬಿಬಿಎಂಪಿ ಮೂರೂ ವಿಭಾಗದ ವರು ಕೂತು ಚರ್ಚಿಸಿ ನೀರಿನ ಸಮಸ್ಯೆ ಬಗೆಹರಿಸಿ, ಕರೆಂಟ್ ಇದ್ದರೆ ನೀರಿರಲ್ಲ, ನೀರಿದ್ದರೆ ಕರೆಂಟ್ ಇರಲ್ಲ. ಬೆಸ್ಕಾಂ ಇದನ್ನು ಗಂಭೀರವಾಗಿ ಪರಿಗಣಿಸಬೇಕು ತಕ್ಷಣವೇ ಜನರಿಗೆ ನೀರು ಕೊಡಲು ಅಧಿಕಾರಿಗಳು ಕ್ರಮ ವಹಿಸಿ ಎಂದು ಆಗ್ರಹಿಸಿದರು.
ಸಭೆಗೆ ಅಪರ ಆಯುಕ್ತ ರಂದೀಪ್ ಉತ್ತರಿಸಿ, ನೀತಿ ಸಂಹಿತೆ ಜಾರಿಯಾದ ಸಮಯದಲ್ಲಿ ಮತದಾರರಿಗೆ ಲಾಬಿ ಮಾಡುವಂತಹ ಯಾವುದೇ ಕೆಲಸಕ್ಕೂ ಅವಕಾಶವಿಲ್ಲ.
ಆದರೆ ಜನರಿಗೆ ಅತ್ಯವಶ್ಯಕವಾದ ಕುಡಿಯುವ ನೀರು, ವೈದ್ಯಕೀಯ, ತುರ್ತು ಕಾಮಗಾರಿಗಳು, ಅತ್ಯವಶ್ಯಕ ಸೇವೆ ಕೊಡುವುದಕ್ಕೆ ಯಾವ ನಿಬಂಧನೆಗಳನ್ನು ಹೇರಿಲ್ಲ ಎಂದು ಸ್ಪಷ್ಟಪಡಿಸಿದರು.