ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ-ಚುನಾವಣಾಧಿಕಾರಿ ಬಿ.ಎಂ.ವಿಜಯ ಶಂಕರ್

ಬೆಂಗಳೂರು, ಮಾ.30-ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 31 ಅಭ್ಯರ್ಥಿಗಳು ಚುನಾವಣಾ ಸ್ಪರ್ಧಾ ಕಣದಲ್ಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳೂ ಆದ ಬೆಂಗಳೂರು ಉತ್ತರ ಲೋಕಸಭಾ ಚುನಾವಣಾಧಿಕಾರಿ ಬಿ. ಎಂ. ವಿಜಯ್ ಶಂಕರ್ ತಿಳಿಸಿದರು.

ನಗರದ ಕೆಂಪೇಗೌಡ ರಸ್ತೆಯ ಕಂದಾಯ ಭವನದದಲ್ಲಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗಣ ಸಭಾಂಗಣದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಸ್ಪರ್ಧಿಗಳ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ,ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಭಾರತ ಚುನಾವಣಾ ಆಯೋಗದಿಂದ ನಿಯೋಜಿತರಾಗಿರುವ ಚುನಾವಣಾ ವೀಕ್ಷಕರಾದ ಟಿ ಎನ್ ವೆಂಕಟೇಶ್, ಪಿ ಸ್ ರೆಡ್ಡಿ ಹಾಗೂ ರೆಡ್ಡಿ ಶಂಕರ್ ಬಾಬು ಅವರನ್ನು ಚುನಾವಣಾ ಕಣದಲ್ಲಿರುವ ಹುರಿಯಾಳುಗಳಿಗೆ ಪರಿಚಯಿಸಿ ಮುಕ್ತ, ನಿಷ್ಪಕ್ಷಪಾತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಹಕರಿಸಲು ಮನವಿ ಮಾಡಿದರು. ಅಲ್ಲದೆ, ಮಾದರಿ ನೀತಿ ಸಂಹಿತೆಯ ಉಲ್ಲಂಘನಾ ಪ್ರಕರಣಗಳನ್ನು ಚುನಾವಣಾ ವೀಕ್ಷರ ಗಮನಕ್ಕೆ ನೇರವಾಗಿ ತರುವಂತೆ ಸೂಚಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 2656 ಮತಗಟ್ಟೆಗಳ ಪೈಕಿ 577 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಪರಿಗಣಿಸಲಾಗಿದೆ. ಅಂತೆಯೇ, 34 ಭೇದ್ಯತಾ ಅಥವಾ ದುರ್ಬಲ ಪ್ರದೇಶಗಳನ್ನು ಗುರುತಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ಕೇಂದ್ರದ ಭದ್ರತಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗುತ್ತದೆ.

ಸೂಕ್ಷ್ಮ ವೀಕ್ಷಕರನ್ನು (ಮೈಕ್ರೋ ಅಬ್ಸರ್ವ್‍ರ್) ನಿಯುಕ್ತಿಗೊಳಿಸಲಾಗುತ್ತದೆ. ಅಲ್ಲದೆ, ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ವೀಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ ಎಂದು ವಿಜಯ್ ಶಂಕರ್ ಅವರು ವಿವರಿಸಿದರು.

ಚುನಾವಣಾ ವೀಕ್ಷಕ ಟಿ. ಎನ್. ವೆಂಕಟೇಶ್ ಮಾತನಾಡಿ, ಒಂದು ಮತಗಟ್ಟೆಯಲ್ಲಿ ಓರ್ವ ಅಭ್ಯರ್ಥಿಯ ಒಬ್ಬ ಪ್ರತಿನಿಧಿ (ಏಜೆಂಟ್) ಗೆ ಮಾತ್ರ ಅವಕಾಶವಿರುತ್ತದೆ, ಈ ಏಜೆಂಟರಿಗೂ ಛಾಯಾಚಿತ್ರ-ಸಹಿತ ಗುರುತಿನ ಚೀಟಿ ನೀಡಲಾಗುವುದು. ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯಕ್ಕೆ ಸಾರ್ವಜನಿಕ ಆಸ್ತಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಳಕೆ ಮಾಡಬಾರದು ಎಂದು ಎಚ್ಚರಿಸಿದರು.

ಮತ್ತೋರ್ವ ಚುನಾವಣಾ ವೀಕ್ಷಕ ರೆಡ್ಡಿ ಶಂಕರ ಬಾಬು ಮಾತನಾಡಿ, ರಾಜ್ಯದ ಜನತೆ ಶಾಂತಿ ಪ್ರಿಯರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆ ನಡೆಸಲು ಎಲ್ಲರೂ ಎಚ್ಚರ ವಹಿಸಬೇಕು. ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಎಂಬುದು ಲಕ್ಷ್ಮಣ ರೇಖೆ ಇದ್ದಂತೆ ! ಅದನ್ನೂ ಯಾರೂ ಯಾವ ಕಾರಣಕ್ಕೂ ಉಲ್ಲಂಘಿಸಬಾರದು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಚುನಾವಣಾ ವೀಕ್ಷಕ ಪಿ.ಎಸ್. ರೆಡ್ಡಿ ಅವರು ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಪ್ರತಿದಿನ ಬೆಳಿಗ್ಗೆ 8ರಿಂದ 9 ರವರೆಗೆ ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ತಮ್ಮನ್ನು ಸಂಪರ್ಕಿಸಬಹುದು. ತಮಗೆ ಯಾರೇ ಆಗಲಿ ಯಾವುದೇ ಸಂದರ್ಭದಲ್ಲಾದರೂ ಭೇಟಿ ಮಾಡಬಹುದು.

ಯಾವುದೇ ದೂರುಗಳಿದ್ದರೂ ನೀಡಬಹುದು. ಸಲಹೆ ಸೂಚನೆಗಳನ್ನು ಕೊಡಬಹುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ