ಬೆಂಗಳೂರು, ಮಾ.30- ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು ದಾಹ ತಣಿಸಿಕೊಳ್ಳಲು ಎಷ್ಟೇ ನೀರು ಕುಡಿದರು ಸಾಕಾಗುತ್ತಿಲ್ಲ. ಈ ಸಮಯದಲ್ಲಿ ತಂಪು ಪಾನೀಯಗಳ ಮೊರೆ ಹೋಗುವುದು ಸರ್ವೆಸಾಮಾನ್ಯ.
ಆರೋಗ್ಯದ ಮೇಲೆ ತಂಪು ಪಾನೀಯಗಳು ಅಡ್ಡಪರಿಣಾಮ ಬೀರುತ್ತವೆ ಎಂದು ಗೊತ್ತಿದ್ದರು ಸಹ ಜನರು ಕುಡಿಯುತ್ತಾರೆ. ಇದರ ಬದಲು ವರ್ಷಪೂರ್ತಿ ಎಲ್ಲ ದಿನಗಳಲ್ಲೂ ದೊರೆಯುವ ಎಳನೀರು ಸೇವಿಸಿದರೆ ದಾಹದ ಜೊತೆಗೆ ಆರೋಗ್ಯ ಚೆನ್ನಾಗಿರುತ್ತದೆ ಅಲ್ವಾ…
ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಎಳನೀರಿಗೆ ಬಹಳ ಬೇಡಿಕೆ ಹೆಚ್ಚಿದ್ದು ಉದ್ಯಾನಗರಿಯಲ್ಲಿ ಈಗಾಗಲೇ 30-35ರೂ.ಗೆ ಒಂದು ಎಳನೀರು ಮಾರಾಟವಾಗುತ್ತಿದೆ. ಎಷ್ಟೇ ಬೆಲೆ ಹೆಚ್ಚಾದರೂ ಪರವಾಗಿಲ್ಲ ಎಂದು ಜನಸಾಮಾನ್ಯರು ಎಳೆನೀರು ಮೊರೆ ಹೋಗಿದ್ದಾರೆ.
ಈ ಬಿಸಿಲಿನಲ್ಲಿ ಘನ ಪದಾರ್ಥಗಳ ಸೇವನೆ ದೇಹಕ್ಕೆ ಹಿತವೆನಿಸುವುದಿಲ್ಲ. ಆದರೆ ಎಳನೀರು ಸೇವನೆಯಿಂದ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆ ದೇಹದಲ್ಲಿ ತಂಪೆನಿಸುತ್ತದೆ. ಇದರಲ್ಲಿ ಹೆಚ್ಚಿನ ಪೋಷಾಕಾಂಶಗಳು ಅಡಗಿದ್ದು, ಕೆಲ ಕಾಯಿಲೆಗಳಿಗೂ ರಾಮಬಾಣವಾಗಿದ್ದು, ಸೇವಿಸಿದ ಕ್ಷಣ ಮಾತ್ರದಲ್ಲೇ ಉತ್ತಮ ಫಲಿತಾಂಶ ಸಿಗುವುದು.
ಮೂತ್ರಪಿಂಡಗಳಲ್ಲಿನ ಕಲ್ಲು, ನಿಶಕ್ತಿ, ಜೀರ್ಣಕ್ರಿಯೆ, ಆ್ಯಸಿಡಿಟಿ ಸೇರಿದಂತೆ ಹಲವು ಸಮಸ್ಯೆಗಳು ದೂರವಾಗುತ್ತವೆ.
ಇಷ್ಟೆಲ್ಲಾ ಔಷಧಿ ಗುಣವನ್ನು ಹೊಂದಿರುವ ಎಳನೀರುನ್ನು ಬೇಸಿಗೆ ನೆಪದಲ್ಲಾದರೂ ಸೇವಿಸಿ ದಾಹ ನೀಗಿಸಿಕೊಳ್ಳುವುದರ ಜೊತೆಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳೋಣ ಎಂದು ಎಳನೀರು ಸೇವಿಸುತ್ತಿದ್ದಾರೆ.
ಪ್ರತಿವರ್ಷಕ್ಕಿಂತ ಈ ವರ್ಷ ಬಿಸಿಲು ಹೆಚ್ಚಾಗಿದ್ದು ಎಳನೀರು ಹೆಚ್ಚಾಗಿ ಮಾರಾಟವಾಗುತ್ತಿದೆ. ಬೆಳ್ಳಂಬೆಳಿಗ್ಗೆ ವಾಯುವಿಹಾರಿಗಳು ಹೆಚ್ಚಾಗಿ ಎಳನೀರು ಸೇವಿಸುತ್ತಿದ್ದಾರೆ ಎಂದು ಎಳನೀರು ವ್ಯಾಪಾರಿಯೊಬ್ಬರು ತಿಳಿಸಿದರು.
ಒಟ್ಟಿನಲ್ಲಿ ಈ ಬಾರಿ ಎಳನೀರು ವ್ಯಾಪಾರ ಜೋರಾಗಿದೆ.