ದೇಶದಲ್ಲೇ ಕಂಡರಿಯದಂತಹ ರಾಜಕೀಯ ಬೆಳವಣಿಗೆ ಕರ್ನಾಟಕದಲ್ಲಿ

ಬೆಂಗಳೂರು, ಮಾ.28-ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್, ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದ ದೇವೇಗೌಡರು ತಮ್ಮ ವೈರತ್ವವನ್ನು ಮರೆತು ಕಾಂಗ್ರೆಸ್ಸಿಗರನ್ನು ಅಪ್ಪಿಕೊಂಡಿದ್ದಾರೆ.

ಜೆಡಿಎಸ್‍ನಿಂದ ಹೊರಬಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿದ ಬಳಿಕ ದೇವೇಗೌಡರು ಮತ್ತು ಅವರ ಬಳಗವನ್ನು ಟೀಕಿಸುವುದರಲ್ಲಿ ಎತ್ತಿದ ಕೈ ಎಂಬ ಹೆಸರು ಪಡೆದಿದ್ದರು. ಆದರೆ ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ನಂತರ ಎಲ್ಲವೂ ಉಲ್ಟಾ-ಪಲ್ಟಾ ಆಗಿದೆ.ಲೋಕಸಭೆ ಚುನಾವಣಾ ಪೂರ್ವ ಮೈತ್ರಿಮಾಡಿಕೊಂಡ ನಂತರವಂತೂ ಎರಡೂ ಪಕ್ಷಗಳ ನಾಯಕರು ಗಳಸ್ಯ-ಕಂಠಸ್ಯರಾಗಿದ್ದಾರೆ.

ಈ ಹಿಂದೆ ಎದುರಾಳಿಯಾಗಿದ್ದ ಈಗ ಮಿತ್ರ ಪಕ್ಷವಾಗಿರುವ ಜೆಡಿಎಸ್ ಪಕ್ಷದ ಕಚೇರಿಗೆ ಅಭ್ಯರ್ಥಿ ಹೋಗಿ ಪ್ರಚಾರ ಸಭೆಯಲ್ಲಿ ಭಾಗವಹಿಸುವಂತಹ ಅಪರೂಪದ ಘಟನೆಗಳು ಕಂಡು ಬರುತ್ತಿವೆ. ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣಭೆರೇಗೌಡ ಮಾ.27ರಂದು ಜೆಡಿಎಸ್ ಕಚೇರಿಗೆ ಹೋಗಿ ಅಲ್ಲಿನ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು.

ಇದರ ಬೆನ್ನಲ್ಲೇ ಗುರುವಾರ ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳ ಪ್ರಮುಖರ ಜಂಟಿ ಸಭೆ ನಡೆಯಿತು.ಅದರಲ್ಲಿ ದೇವೇಗೌಡರು, ಸಿದ್ದರಾಮಯ್ಯ, ದಿನೇಶ್‍ಗುಂಡೂರಾವ್ ಎಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.ಎರಡೂ ಪಕ್ಷಗಳಲ್ಲಿ ಒಂದು ರೀತಿಯ ಬೀಗತನದ ವಾತಾವರಣ, ಸಂಭ್ರಮ ಮನೆ ಮಾಡಿದೆ.

ದೋಸ್ತಿ ಪಕ್ಷಗಳ ಈ ಹೊಂದಾಣಿಕೆ ಮತದಾನದ ವೇಳೆ ಯಾವ ಮಟ್ಟಿನ ಪರಿಣಾಮ ಬೀರಲಿದೆ ಎಂಬುದನ್ನು ಫಲಿತಾಂಶವೇ ಹೇಳಬೇಕು. ಕಳೆದ ವರ್ಷದ ಮೇ 23ರಂದು ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ ವೇಳೆ ದೇಶದ 27ಕ್ಕೂ ಹೆಚ್ಚು ಜಾತ್ಯಾತೀತ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಹೊಸ ರಾಜಕೀಯ ಮುನ್ನುಡಿ ಬರೆದರು.

ಆವರೆಗೂ ಕಾಂಗ್ರೆಸ್, ಬಿಜೆಪಿಯೇತರ ಪಕ್ಷಗಳನ್ನೊಳಗೊಂಡ ತೃತೀಯ ಸಂಘಟನೆಗೆ ಮುಂದಾಗಿದ್ದ ಪಕ್ಷಗಳು ಬಿಜೆಪಿ ಮತ್ತು ಅದರ ಸಿದ್ಧಾಂತ ಆಧಾರಿತ ಪಕ್ಷಗಳನ್ನು ಹೊರತುಪಡಿಸಿ ಜಾತ್ಯತೀತ ನೆಲೆಯಲ್ಲಿ ಒಗ್ಗೂಡಲಾರಂಭಿಸಿದವು. ಅದರ ಪರಿಣಾಮ ಅನಂತರ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಹಲವು ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಹೆಚ್ಚು ಸ್ಥಾನ ಗಳಿಸಿವೆ.

ಈ ಪ್ರಯೋಗ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಬಲವಾಗಿಯೇ ಅನುಷ್ಠಾನಕ್ಕೆ ಬರುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಂಚಿ ಹೋಗುತ್ತಿದ್ದ ಮತಗಳು ಈಗ ಮೈತ್ರಿಯಿಂದ ಕ್ರೋಢೀಕರಣಗೊಳ್ಳುತ್ತವೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಜೆಡಿಎಸ್ 1999ರಲ್ಲಿ ಅಸ್ತಿತ್ವಕ್ಕೆ ಬಂದ ದಿನದಿಂದ ಈವರೆಗೆ ಸರಾಸರಿ ಗರಿಷ್ಠ ಶೇ.20 ರಿಂದ ಕನಿಷ್ಠ ಶೇ.11ರವರೆಗೆ ಮತ ಗಳಿಸಿಕೊಂಡಿದೆ. ಕಾಂಗ್ರೆಸ್ ಗರಿಷ್ಠ ಶೇ.45 ರಿಂದ ಕನಿಷ್ಠ ಶೇ.37ರವರೆಗೂ ಮತಗಳಿಸಿಕೊಂಡಿದೆ.ಈ ಎರಡೂ ಪಕ್ಷಗಳು ಒಗ್ಗೂಡಿದರೆ ಶೇ.65ರವರೆಗೂ ಮತ ಗಳಿಕೆಯಾಗಲಿದೆ.

ಗರಿಷ್ಠ ಶೇ.43ರಿಂದ ಕನಿಷ್ಠ ಶೇ.34ರವರೆಗೆ ಮತ ಗಳಿಸಲಿವೆ. ಕಡಿಮೆ ಪ್ರಮಾಣದ ಮತ ಗಳಿಕೆ ಮಾಡಿಕೊಂಡಿದ್ದರೂ ಬಿಜೆಪಿ ಹೆಚ್ಚು ಗೆಲ್ಲಿಸಿಕೊಳ್ಳುತ್ತಿತ್ತು.ಅದಕ್ಕೆ ಕಾರಣ ಜಾತ್ಯತೀತ ಮತಗಳು ಹರಿದುಹಂಚಿ ಹೋಗುತ್ತಿದ್ದುದು.ಈ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡೇ ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಬಾರಿ ಬಿಎಸ್‍ಪಿ ಅಭ್ಯರ್ಥಿಗಳು ಕೆಲವೆಡೆ ಕಣದಲ್ಲಿದ್ದಾರೆ.ಒಂದೆರಡು ಕಡೆ ಪಕ್ಷೇತರರು ಪ್ರಬಲವಾಗಿದ್ದಾರೆ. ಇನ್ನು ಕಮ್ಯುನಿಸ್ಟ್ಟ್, ಜೆಡಿಯು ಪಕ್ಷಗಳು ಅಲ್ಲಲ್ಲಿ ಸ್ಪರ್ಧಿಸಿವೆಯಾದರೂ ಈವರೆಗಿನ ಅಂಕಿಅಂಶಗಳನ್ನು ನೋಡಿದರೆ ಶೇ.2ಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸಿಲ್ಲ. ಹೀಗಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಮಿತ್ರ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ