ಫೇಸ್‍ಬುಕ್ ಪೇಜ್ ಮೂಲಕ ಬಿಜೆಪಿ ಮತದಾರರನ್ನು ಓಲೈಸಲು ಗಿಫ್ಟ್ ಗಳ ಆಮಿಷವೊಡ್ಡಿದೆ-ಕಾಂಗ್ರೇಸ್‍ನ ಮಾಜಿ ಸಂಸದೆ ರಮ್ಯಾ

ಬೆಂಗಳೂರು, ಮಾ.29- ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಫೇಸ್‍ಬುಕ್‍ನಲ್ಲಿ ಉಡುಗೊರೆಗಳ ಆಮಿಷ ನೀಡುತ್ತಿದ್ದೆ ಎಂದು ಮಾಜಿ ಸಂಸದೆ ಹಾಗೂ ನಟಿ ದಿವ್ಯಸ್ಪಂದನ(ರಮ್ಯ) ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಫೇಸ್‍ಬುಕ್ ಪೇಜ್ ಮೂಲಕ ಬಿಜೆಪಿ ಮತದಾರರನ್ನು ಓಲೈಸಲು ಗಿಫ್ಟ್‍ಗಳ ಆಮಿಷವೊಡ್ಡಿದೆ. ಬಿಜೆಪಿ ಪರ ಮತಚಲಾಯಿಸಲು ಮೋದಿ ಚಿತ್ರವಿರುವ ಬ್ಯಾಡ್ಜ್‍ಗಳು, ಬ್ಯಾಗ್‍ಗಳು, ಟಿ-ಶರ್ಟ್‍ಗಳು, ಪೋನ್ ಕವರ್‍ಗಳು, ಕ್ಯಾಪ್‍ಗಳನ್ನು ಉಡುಗೊರೆ ರೂಪದಲ್ಲಿ ನೀಡುತ್ತಿದೆ. ಇದಕ್ಕಾಗಿ 53ಲಕ್ಷ ರೂ.ಗಳನ್ನು ಪಕ್ಷವು ವೆಚ್ಚ ಮಾಡಿದೆ ಎಂದು ಮಾಧ್ಯಮಗಳಿಂದ ತಿಳಿದು ಬಂದಿದೆ ಎಂದು ಕಾಂಗ್ರೆಸ್ ಸೋಷಿಯಲ್ ಮಿಡಿಯಾ ಮುಖ್ಯಸ್ಥೆಯೂ ಆದ ರಮ್ಯ ಆಪಾದಿಸಿದ್ದಾರೆ.

ಇದು ಒಂದು ರೀತಿಯ ಲಂಚದ ಸ್ವರೂಪವಾಗಿದ್ದು ಜನತಾ ಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬ ಅಂಶವನ್ನು ಸಹ ರಮ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಫೇಸ್‍ಬುಕ್‍ನ ಈ ಪುಟ ಮತ್ತು ಇದಕ್ಕೆ ಸಂಬಂಧಪಟ್ಟ ನೆಟ್‍ವರ್ಕ್ ಅನ್ನು ಕೂಡಲೇ ಸ್ಥಗಿತಗೊಳಿಸಬೇಕು. ಹಾಗೂ ಜಾಹೀರಾತು ಪ್ರಚಾರ ವೆಚ್ಚಗಳು ಕಾರ್ಯನಿರ್ವಹಣಾ ವೆಚ್ಚ ಈ ಪುಟವನ್ನು ಚಾಲನೆ ಮಾಡುತ್ತಿರುವ ಸಿಬ್ಬಂದಿಗಳ ವೇತನ ಮತ್ತು ಇತರ ಸೌಲಭ್ಯಗಳೂ ಸೇರಿದಂತೆ ಇದಕ್ಕೆ ಸಂಬಂಧಪಟ್ಟ ಎಲ್ಲ ಖರ್ಚು-ವೆಚ್ಚಗಳನ್ನೂ ಪ್ರಧಾನಮಂತ್ರಿ ಮೋದಿಯವರ ವೈಯಕ್ತಿಕ ಚುನಾವಣಾ ವೆಚ್ಚಗಳಿಗೆ ಸೇರ್ಪಡೆ ಮಾಡಬೇಕೆಂದು ರಮ್ಯ ಒತ್ತಾಯ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ