ಬೆಂಗಳೂರು: ನಟ ಚಿರಂಜೀವಿ ಸರ್ಜಾ, ಚೇತನ್ ಕುಮಾರ್ ಅಭಿನಯದ ‘ರಣಂ’ ಚಿತ್ರದ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ಮಹಿಳೆ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಗಲೂರಿನಲ್ಲಿ ನಡೆದಿದೆ.
‘ರಣಂ’ ಚಿತ್ರದ ಫೈಟಿಂಗ್ ಸೀನ್ ಶೂಟಿಂಗ್ ಬಾಗಲೂರು ಬಳಿ ನಡೆಯುತ್ತಿತ್ತು. ಈ ವೇಳೆ ನಮಾಜ್ ಮುಗಿಸಿ ಆಗಷ್ಟೇ ಬಂದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಚಿತ್ರೀಕರಣ ನಡೆಯುತ್ತಿದ್ದುದನ್ನು ನೋಡುತ್ತಿದ್ದರು. ಈ ವೇಳೆ ಚಿತ್ರೀಕರಣಕ್ಕೆ ಬಳಸಿದ್ದ ಕಾರಿನ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಶೂಟಿಂಗ್ ವೀಕ್ಷಿಸುತ್ತಿದ್ದ ತಾಯಿ, ಮಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಮಗುವಿಗೆ ಗಾಯಗಳಾಗಿವೆ.
ಮೃತರನ್ನು ಬಾಗಲೂರಿನ ಸುಮೈರಾ(28) ಹಾಗೂ ಆಯಿರಾ (8) ಎಂದು ಗುರುತಿಸಲಾಗಿದೆ. ಅವಘಡ ನಡೆಯುತ್ತಿದ್ದಂತೆಯೇ ಚಿತ್ರತಂಡ ಸ್ಥಳದಿಂದ ಕಾಲ್ಕಿತ್ತಿದ್ದು, ಚಿತ್ರದ ಯಾರೊಬ್ಬರೂ ಸ್ಥಳದಲ್ಲಿಲ್ಲ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.