ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನಾಗಿ ಸಂಸದ ಸಂಗಣ್ಣ ಕರಡಿ

ಕೊಪ್ಪಳ ಮಾ 29: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಹಾಲಿ ಸಂಸದರಾದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಬಿ ಫಾರಂ ವಿತರಿಸುವ ಮೂಲಕ ಬಿಜೆಪಿ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದರು.

ಇದೇ ವೇಳೆ ಯಡಿಯೂರಪ್ಪ ಅವರನ್ನು ಅಭಿನಂದಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಸಂಗಣ್ಣ ಕರಡಿ ಅವರು, ಈ ಬಾರಿ ಕೊಪ್ಪಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾಹಿತಿ ಕೇಂದ್ರದ ನಮ್ಮ ವರಿಷ್ಠರಿಗೆ ಇದ್ದ ಕಾರಣಕ್ಕೆ ಇಷ್ಟುದಿನ ಅಭ್ಯರ್ಥಿ ಯಾರು ಎಂದು ಘೊಷಣೆ ಮಾಡಿರಲಿಲ್ಲ. ಆದರೆ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಗೊತ್ತಾದ ಬಳಿಕವೇ ಇಂದು ರಾಜ್ಯದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ನಮ್ಮ ಕ್ಷೇತ್ರದಲ್ಲೂ ಆಕಾಂಕ್ಷಿಗಳಿದ್ದರು, ಆದರೆ ಹೈಕಮಾಂಡ್ ನನಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡಿದೆ.

ಇದಕ್ಕಾಗಿ ಪಕ್ಷದ ಎಲ್ಲಾ ವರಿಷ್ಠರು, ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ ಎಂದರು.

ಟಿಕೆಟ್ ಆಕಾಂಕ್ಷಿಗಳಾಗಿ ಹಲವರು ಇದ್ದರೂ ನಮ್ಮಲ್ಲಿ ತೀವ್ರತರವಾದ ಪೈಪೋಟಿ ಇರಲಿಲ್ಲ. ಅನೇಕ ಊಹಾಪೋಗಳು ಎದ್ದಿದ್ದವು, ಈ ಹಿಂದೆ ಧೂಳುಮುಕ್ತ ಹೋರಾಟ ಮಾಡಿದ ಕಾರಣ ಬೆಂಗಳೂರಿನ ನ್ಯಾಯಾಲಯದಲ್ಲಿ ಕೇಸ್‌ನ ತೀರ್ಪು ಇತ್ತು. ಹೀಗಾಗಿ ನಮ್ಮ ಪಕ್ಷದ ನಾಯಕರೊಂದಿಗೆ ನಾನು ಕಳೆದ ನಾಲ್ಕೈದು ದಿನದಿಂದ ಇಲ್ಲೇ ಇದ್ದೆ. ನಿನ್ನೆ ಕೇಸ್ ಖುಲಾಸೆ ಮಾಡಿ ಕೋರ್ಟ್ ತೀರ್ಪು ನೀಡಿದೆ. ಇದನ್ನೇ ಬೇರೆ ರೀತಿ ಅರ್ಥೈಸಲಾಗಿದೆ. ಇದೀಗ ಬಿ ಫಾರಂ ನೀಡಿದ್ದು ಎಲ್ಲಾ ಮುಖಂಡರು ಒಟ್ಟಾಗಿ ಪಡೆದು ಕ್ಷೇತ್ರಕ್ಕೆ ಹೋಗುತ್ತೇವೆ. ನಾಯಕರೊಂದಿಗೆ ಚರ್ಚಿಸಿ ನಾಮಪತ್ರ ಸಲ್ಲಿಸುವ ದಿನಾಂಕ ಘೋಷಣೆ ಮಾಡಲಾಗುತ್ತದೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಈ ಬಾರಿಯೂ ಸಹ ಕೊಪ್ಪಳ ಕ್ಷೇತ್ರದ ಮತದಾರರು ನನಗೆ ಮತ್ತೊಮ್ಮೆ ಗೆಲ್ಲಿಸಲಿದ್ದಾರೆ. ನಮ್ಮ ಪಕ್ಷದ ನಾಯಕರೆಲ್ಲ ಒಟ್ಟಾಗಿ ಮೋದಿ, ಬಿಜೆಪಿ ಗೆಲುವಿಗೆ ಸಹಕರಿಸಲಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ