ಇಟವಾ: ನಮ್ಮತ್ತ, ನಮ್ಮ ಪಕ್ಷದತ್ತ ಬೆರಳು ತೋರಿಸಿದವರೆ ಅಂತವರ ಬೆರಳನ್ನೇ ಕತ್ತರಿಸುವುದಾಗಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಇಟಾವಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ್ ಶಂಕರ್ ಕಥೇರಿಯಾ ಹೇಳಿಕೆ ನೀಡಿದ್ದಾರೆ.
ಇಟಾವಾ ಕ್ಷೇತ್ರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ನಮ್ಮ ವಿರುದ್ಧ ಯಾರೂ ಬೆರಳು ತೋರಿಸುವಂತಿಲ್ಲ. ಒಂದು ವೇಳೆ ತೋರಿಸಿದರೆ ಆ ಬೆರಳನ್ನೇ ಮುರಿಯುತ್ತೇವೆ ಎಂದು ಹೇಳಿದ್ದಾರೆ.
ಮಾಯಾವತಿ ಸರ್ಕಾರವಿದ್ದಾಗ ತಮ್ಮ ಹಾಗೂ ಬಿಜೆಪಿ ನಾಯಕರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳ ಬಗ್ಗೆ ಮಾತನಾಡುತ್ತಾ ಮಾಯಾವತಿಯವರು ಎಷ್ಟು ಪ್ರಕರಣಗಳನ್ನಾದರೂ ನನ್ನ ವಿರುದ್ಧ ದಾಖಲಿಸಲಿ. ಅದರ ವಿರುದ್ಧ ನಾನು ಹೋರಾಡುತ್ತೇನೆ. ಆದರೆ, ನನ್ನ ಜೈಲಿಗೆ ಹಾಕಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಮಾಯಾವತಿಗೆ ಸವಾಲು ಹಾಕಿದರು.
ನನ್ನನ್ನು ಜೈಲಿಗಟ್ಟಲು ಮಾಯಾವತಿಯವರು ಅನೇಕ ಬಾರಿ ಪ್ರಯತ್ನಿಸಿದರು. ಅವರು ನನ್ನ ವಿರುದ್ಧ 29 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೂ ಕೂಡ ನಾನು ಅವರಿಗೆ ಹೆದರಿಲ್ಲ. ನಾನು ಭಾರಿ ಆತ್ಮವಿಶ್ವಾಸದಿಂದಲೇ ಅವರ ವಿರುದ್ಧ ಹೋರಾಡುತ್ತಿದ್ದೇನೆ. ನಮ್ಮ ವಿರುದ್ಧ ಯಾರು ಹುಬ್ಬೇರಿಸುತ್ತಾರೋ ಅವರ ವಿರುದ್ಧವೂ ಅದೇ ವರ್ತನೆಯನ್ನು ನಾವು ತೋರಬೇಕು. ನಾನು ಎಲ್ಲ ಪರಿಸ್ಥಿತಿಯಲ್ಲಿಯೂ ನಿಮ್ಮ ಜತೆಯಲ್ಲಿರುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
Will break fingers pointed at us: BJP Etawah candidate Ram Shankar