ಬೆಂಗಳೂರು,ಮಾ.28- ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಸದುದ್ದೇಶದಿಂದ ಸರ್ಕಾರದ ಪರ ಕೆಲಸ ಮಾಡುತ್ತಿರುವ ಕೆಲವು ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಮಾಜಿ ಸಚಿವ ಸುರೇಶ್ಕುಮಾರ್, ರಾಜ್ಯ ಬಿಜೆಪಿ ಚುನಾವಣಾ ಪ್ರಕೋಷ್ಟದ ಸಂಚಾಲಕ ದತ್ತಗುರು ಹೆಗ್ಡೆ ನೇತೃತ್ವದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಲಾಯಿತು.
ಈ ಅಧಿಕಾರಿಗಳು ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯವೇ ಇಲ್ಲ. ಹೀಗಾಗಿ ಕೂಡಲೇ ಇವರನ್ನು ವರ್ಗಾವಣೆ ಮಾಡಿ ಬೇರೊಬ್ಬ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಲಾಯಿತು.
ದೂರು ಸ್ವೀಕರಿಸಿದ ಸಂಜೀವ್ಕುಮಾರ್ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಒಂದು ವೇಳೆ ಅಧಿಕಾರಿಗಳು ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದರು.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ರಾಜೀವ್ಚಂದ್ರಶೇಖರ್ ಕೆಲವು ಅಧಿಕಾರಿಗಳು ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಬೇಕೆಂದು ಆಯೋಗ ಸೂಚನೆ ಕೊಟ್ಟಿದ್ದರೂ ತಮ್ಮ ಸ್ವಾರ್ಥ ಹಿತಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ.ಹೀಗಾಗಿ ಇವರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದ್ದೇವೆ.
ಸಂಜೀವ್ಕುಮಾರ್ ಪರಿಶೀಲಿಸಿ ಕಾನೂನು ಪ್ರಕಾರವೇ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಯಾವ ಯಾವ ರೀತಿ ನಡೆದುಕೊಂಡಿದ್ದಾರೆ, ಸರ್ಕಾರದ ಪರವಾಗಿ ಇವರು ಹೇಗೆಲ್ಲ ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತು ದಾಖಲೆಗಳ ಸಮೇತ ದೂರು ಸಲ್ಲಿಸಿದ್ದೇವೆ. ನಮಗೆ ಆಯೋಗದಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಸುರೇಶ್ಕುಮಾರ್ ಮಾತನಾಡಿ, ಯಾವುದೇ ಅಧಿಕಾರಿಗಳು ಸರ್ಕಾರದ ಪರ ಕರ್ತವ್ಯ ನಿರ್ವಹಿಸುವುದು ಶಿಕ್ಷಾರ್ಹ ಅಪರಾಧ.ಸರ್ಕಾರ ಯಾವುದೇ ಇರಲಿ ಅಥವಾ ಅದರ ಮುಖ್ಯಸ್ಥರು ಯಾರೇ ಇರಲಿ ಅಧಿಕಾರಿಗಳು ತಮ್ಮ ಕೆಲಸವನ್ನಷ್ಟೇ ಮಾಡಬೇಕು.ಪಕ್ಷಪಾತ ಧೋರಣೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಯಾರ ಯಾರ ವಿರುದ್ಧ ದೂರು:
ಮಂಜುನಾಥ್ ಪ್ರಸಾದ್-ಬಿಬಿಎಂಪಿ ಆಯುಕ್ತ
ಕರಿಗೌಡ- ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ
ವಿಜಯಶಂಕರ್- ಜಿಲ್ಲಾಧಿಕಾರಿ, ಬೆಂಗಳೂರು
ಆಲಂ ಪಾಷ- ಜಿಲ್ಲಾಧಿಕಾರಿ, ಹಾಸನ
ಪ್ರಕಾಶ್ಗೌಡ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ
ಎಚ್.ಸಿ.ಮಹದೇವ್-ಜಿಲ್ಲಾಧಿಕಾರಿ ಬೀದರ್
ವೆಂಕಟೇಶ್ ಕುಮಾರ್-ಉಪ ಆಯುಕ್ತರು, ಕಲಬುರಗಿ
ಲಾಡಾ ಮಾರ್ಟಿನ್ ಮರ್ಬನ್ಜಂಗ್- ಪೊಲೀಸ್ ವರಿಷ್ಠಾಧಿಕಾರಿ, ಕಲಬುರಗಿ
ಬಲಭೀಮ ಕಾಂಬ್ಳೆ –
ಟಿ.ಯೋಗೇಶ್-ಹೆಚ್ಚುವರಿ ಜಿಲ್ಲಾಧಿಕಾರಿ , ಕಲಬುರಗಿ
ಶಶಿಕಾಂತ್- ಡಿಸಿಪಿ, ಬೆಂಗಳೂರು ಉತ್ತರ
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ತುಮಕೂರು ಅಬಕಾರಿ ಇಲಾಖೆ ಡಿಸಿ