ಬೆಂಗಳೂರು, ಮಾ.28-.ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಉತ್ತರ ಕ್ಷೇತ್ರದ ಪ್ರಚಾರಪೂರ್ವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಜಂಟಿ ಸಭೆ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು, ಅಭಿವೃದ್ಧಿ ಮಾತನಾಡುತ್ತಿಲ್ಲ, ಕೇವಲ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಾಜಕೀಯ ದುರುದ್ದೇಶಕ್ಕಾಗಿಯೇ ಕಾಂಗ್ರೆಸ್-ಜೆಡಿಎಸ್ ಮೇಲೆ ದಾಳಿ ಮಾಡಿ ಬ್ಲ್ಯಾಕ್ಮೇಲ್ ಮಾಡಿದರೆ ನಾವು ಹೆದರುವುದಿಲ್ಲ. ಒಬ್ಬ ಬಿಜೆಪಿಯವರ ಮೇಲೆ ದಾಳಿ ನಡೆದಿಲ್ಲ. ಆಪರೇಷನ್ ಕಮಲಕ್ಕಾಗಿ ನೂರಾರು ಕೋಟಿ ಖರ್ಚು ಮಾಡಿದ್ದರು. ಈ ಬಗ್ಗೆ ನಾವು ದೂರುಕೊಟ್ಟರೂ ಕ್ರಮಕೈಗೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತ್ಯತೀತ ಶಕ್ತಿ ಒಂದಾಗಿದ್ದೇವೆ ಎಂದು ತೋರಿಸಲು ಈ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಐಟಿ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಐಟಿ ದಾಳಿ ಖಂಡಿಸಿ ಇಂದು ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ನಮ್ಮ ನಾಯಕರ ತೇಜೋವಧೆ ಹಾಗೂ ಅಪಪ್ರಚಾರ ನಡೆಯುತ್ತಿದೆ.ಅದನ್ನು ಸಮರ್ಥವಾಗಿ ಎದುರಿಸಬೇಕು.ದೇವೇಗೌಡರು ಬೆಂಗಳೂರು ಉತ್ತರಕ್ಕೆ ಅಭ್ಯರ್ಥಿಯಾಗಬೇಕು ಎಂಬುದು ನಮ್ಮ ಆಸೆಯಾಗಿತ್ತು. ಸದಾನಂದಗೌಡರನ್ನು ಅವರ ಊರಿಗೆ ವಾಪಸ್ ಕಳುಹಿಸಲು ಸಿದ್ಧರಿದ್ದೆವು. ಆದರೆ ದೇವೇಗೌಡರು ತುಮಕೂರನ್ನು ಆಯ್ಕೆ ಮಾಡಿಕೊಂಡು ಕೃಷ್ಣಭೆರೇಗೌಡರನ್ನು ಸೂಚಿಸಿದರು. ಸುಳ್ಳುಗಾರ, ಮೋಸಗಾರ ಮೋದಿಯನ್ನು ಮನೆಗೆ ಕಳುಹಿಸಬೇಕು ಎಂದು ಹೇಳಿದರು.