ಬೆಂಗಳೂರು,ಮಾ.27-ಏಪ್ರಿಲ್ 18ರಂದು ಮತದಾನ ನಡೆಯುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಇಂದು ನಡೆದಿದೆ. ತುಮಕೂರಿನಲ್ಲಿ 5 ವಿವಿಧ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತವಾಗಿದ್ದು, ಇತರೆ ಕ್ಷೇತ್ರಗಳಲ್ಲೂ ಸಲ್ಲಿಸಿದ್ದ ಕೆಲವು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡಿವೆ. ಸಂಜೆ ವೇಳೆಗೆ ನಾಮಪತ್ರ ಕ್ರಮಬದ್ಧವಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ನಾಮಪತ್ರ ಹಿಂಪಡೆಯಲು ಚುನಾವಣಾ ಆಯೋಗ ಮಾ.29ರವರೆಗೆ ಗಡುವು ನೀಡಿದ್ದು, ಅಂದು ಸಂಜೆ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ.
ಕಳೆದ ಮಾ.29ರಿಂದ ನಿನ್ನೆಯವರೆಗೆ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 362 ಅಭ್ಯರ್ಥಿಗಳು 455 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಇವರಲ್ಲಿ 337 ಪುರುಷ, 25 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ.
ಕಡೆದಿನವಾದ ನಿನ್ನೆ 181 ಅಭ್ಯರ್ಥಿಗಳು 222 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಚಿತ್ರದುರ್ಗ, ಚಾಮರಾಜನಗರ, ಕೋಲಾರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ 64 ಅಭ್ಯರ್ಥಿಗಳು 79 ನಾಮಪತ್ರ ಸಲ್ಲಿಸಿದ್ದಾರೆ. ಚಿತ್ರದುರ್ಗ ಕ್ಷೇತ್ರದಲ್ಲಿ 26 ಅಭ್ಯರ್ಥಿಗಳು 31 ನಾಮಪತ್ರಗಳು, ಚಾಮರಾಜನಗರದಲ್ಲೂ 13 ಅಭ್ಯರ್ಥಿಗಳು 18 ನಾಮಪತ್ರಗಳು ಹಾಗೂ ಕೋಲಾರದಲ್ಲಿ 25 ಅಭ್ಯರ್ಥಿಗಳು 30 ನಾಮಪತ್ರಗಳನ್ನು ಸಲ್ಲಿಸಿದ್ದು, ಈ ಮೂರು ಕ್ಷೇತ್ರಗಳಲ್ಲಿ ಪುರುಷ ಅಭ್ಯರ್ಥಿಗಳೇ ಸ್ಪರ್ಧಿಗಿಳಿದಿದ್ದಾರೆ.
ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ 589 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಅವರಲ್ಲಿ 561 ಪುರುಷ ಹಾಗೂ 27 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಮಂಡ್ಯ, ಚಾಮರಾಜನಗರ ಮೈಸೂರು-ಕೊಡಗು, ದಕ್ಷಿಣಕನ್ನಡ, ಉಡುಪಿ-ಚಿಕ್ಕಮಗಳೂರು, ತುಮಕೂರು ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಿನ್ನೆಗೆ ಮುಕ್ತಾಯಗೊಂಡಿದೆ.
ಒಂದೆಡೆ ಬಂಡಾಯದ ಬಿಸಿ ತಟ್ಟುತ್ತಿದ್ದರೂ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು ಪ್ರಚಾರದಲ್ಲಿ ತೊಡಗಿದ್ದು ಚುನಾವಣಾ ಅಖಾಡ ರಂಗೇರತೊಡಗಿದೆ.
ಬಂಡಾಯಗಾರರ ಮನವೊಲಿಸುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮತದಾರರ ಮನವೊಲಿಸಲು ರೋಡ್ ಶೋ, ಬಹಿರಂಗ ಪ್ರಚಾರ ನಡೆಸಲಾಗುತ್ತಿದ್ದು, ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ.
ಈ 14 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 10, ಜೆಡಿಎಸ್ ನಾಲ್ಕು, ಬಿಜೆಪಿ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಬಿಎಸ್ಪಿ, ಸಿಪಿಐ ಸೇರಿದಂತೆ ಇತರೆ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅತಿಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರು ಸ್ಫರ್ಧೆಯಲ್ಲಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದ್ದು, ಅಷ್ಟರಲ್ಲಿ ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನವನ್ನು ರಾಜಕೀಯ ಪಕ್ಷಗಳು ಮಾಡಬೇಕಿದೆ.ಇಲ್ಲದಿದ್ದರೆ ಅಧಿಕೃತ ಅಭ್ಯರ್ಥಿಗಳು ಬಂಡಾಯದ ಬಿಸಿ ಎದುರಿಸುವಂತಾಗುತ್ತದೆ.