ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಕೆಲವೇ ಕೆಲ ನಿಮಿಷಗಳ ಕಾಲ ಇಂದು ಮಾತನಾಡಿದರು. ದೇಶವನ್ನು ದ್ದೇಶಿಸಿ ಮಾತನಾಡುವ ಬಗ್ಗೆ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡ ನಂತರ ವ್ಯಾಪಕ ಕುತೂಹಲ ಮನೆ ಮಾಡಿತ್ತು. 12.30 ಮಾತು ಆರಂಭಿಸಿದ ಪ್ರಧಾನಿ, ಭಾರತ ಬಾಹ್ಯಾಕಾಶ ಶಕ್ತಿಯನ್ನು ಪ್ರಪಂಚದಲ್ಲೇ ನಾಲ್ಕನೇ ಸ್ಥಾನಕ್ಕೇರಿದ್ದೇವೆ ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡರು. ಈ ಮೂಲಕ ತಂತ್ರಜ್ಞಾನ ಆವಿಷ್ಕಾರ ಮತ್ತು ಉಪಯೋಗದಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ ಎಂಬುದನ್ನು ದೇಶದ ಜನರಿಗೆ ತಲುಪಿಸಿದರು.
ಮಿಷನ್ ಶಕ್ತಿಯ ಬಗ್ಗೆ ಮಾತನಾಡಿದ ಮೋದಿ, ಮೂರು ನಿಮಿಷಗಳ ರೋಚಕ ಸಾಹಸದಲ್ಲಿ ಹೇಗೆ ಬಾಹ್ಯಾಕಾಶ ತಂತ್ರಜ್ಙರು ಅನುಪಯುಕ್ತ ಉಪಗ್ರಹವನ್ನು ಅಂತರಿಕ್ಷ ಕಕ್ಷೆಯಲ್ಲೇ ಹೊಡೆದುರುಳಿಸಿರುವುದನ್ನು ತಿಳಿಸಿದರು. ಹಾಗಿದ್ದರೆ ಏನಿದು ಮಿಷನ್ ಶಕ್ತಿ?
ಏನಿದು ಮಿಷನ್ ಶಕ್ತಿ?:
ಈ ಪ್ರಶ್ನೆಗೆ ಬಾಹ್ಯಾಕಾಶ ವಿಜ್ಞಾನಿ ಮತ್ತು ಖ್ಯಾತ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ವಿಸ್ತೃತವಾಗಿ ವಿವರಣೆ ನೀಡಿದ್ದು, “ಎಷ್ಟೊಂದು ಉಪಗ್ರಹಳನ್ನು ನಾವು ಉಡಾವಣೆ ಮಾಡುತ್ತೇವೆ. ಕಕ್ಷೆಯಲ್ಲಿ ತನ್ನ ಕೆಲಸ ಮುಗಿಸಿದ ನಂತರ, ಒಂದೋ ಆ ಉಪಗ್ರಹದ ಕೆಲಸ ನಿಂತು ಹೋಗತ್ತೆ. ಬ್ಯಾಟರಿ ಕಡಿಮೆಯಾದ ನಂತರ, ಅಥವಾ ತಂತ್ರಜ್ಞಾನದ ಸಮಸ್ಯೆಯಿಂದ ಉಪಗ್ರಹ ಅನುಪಯುಕ್ತವಾಗಬಹುದು. ಭೂಮಿಯಿಂದ ಅದನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಅದು ಬೇರೆ ಬೇರೆ ಕಕ್ಷೆಗಳಿಗೆ ಹೋಗಬಹುದು, ಅದರಿಂದ ಇತರ ಉಪಗ್ರಹಗಳ ಕಾರ್ಯಾಚರಣೆಗೆ ಅಡಚಣೆಯಾಗಬಹುದು,” ಎನ್ನುತ್ತಾರೆ ಹಾಲ್ದೊಡ್ಡೇರಿ.
ಮುಂದುವರೆದ ಅವರು, “ಅದನ್ನು ನಾಶ ಮಾಡಲು, ಲೇಸರ್ ಕಿರಣಗಳನ್ನು ಭೂಮಿಯಿಂದಲೇ ಕಳುಹಿಸಿ ಉಪಗ್ರಹವನ್ನು ಸುಟ್ಟು ಬಿಡುವುದು, ಅದಕ್ಕೂ ಮುನ್ನ ಉಪಗ್ರಹ ಯಾವ ಸಮಯದಲ್ಲಿ ಅಂತರಿಕ್ಷದಲ್ಲಿ ಯಾವ ಕಕ್ಷೆಗೆ ಬರುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಬೇಕಾಗುತ್ತದೆ. ನಮ್ಮದೇ ದೇಶದ ನಿರುಪಯುಕ್ತ ಉಪಗ್ರಹವನ್ನು ಲೇಸರ್ ಕಿರಣಗಳ ಮೂಲಕ ಈಗ ನಾಶ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ದೇಶ ಈ ಕೆಲಸವನ್ನು ಮಾಡುವಲ್ಲಿ ಶಕ್ತವಾಗಿದೆ,” ಎಂದರು.
“ಮಿಷನ್ ಶಕ್ತಿ ಎಂದರೆ, ನಮ್ಮ ಭೂಮಿಯಿಂದಲೇ ಲೇಸರ್ ಕಿರಣಗಳನ್ನು ಬಾಹ್ಯಾಕಾಶಕ್ಕೆ ಬಿಟ್ಟು ಅನುಪಯುಕ್ತ ಉಪಗ್ರಹವನ್ನು ನಾಶ ಮಾಡುವುದು,” ಎನ್ನುತ್ತಾರೆ ಹಾಲ್ದೊಡ್ಡೇರಿ.
1997ರಲ್ಲಿ ಇದೇ ರೀತಿಯ ಪರೀಕ್ಷೆಯನ್ನು ಅಮೆರಿಕ ಮಾಡಿತ್ತು, 2007 ಚೀನಾ ದೇಶ ಮಾಡಿತ್ತು ಇದಕ್ಕೂ ಮುನ್ನ ರಷ್ಯಾ ಕೂಡ ಮಾಡಿತ್ತು ಎಂದು ಮಾಹಿತಿ ನೀಡುತ್ತಾರೆ ಸುಧೀಂದ್ರ ಹಾಲ್ದೊಡ್ಡೇರಿ.