ಕಾಂಗ್ರೇಸ್ಸಿನಿಂದ ಕನಿಷ್ಟ ಆದಾಯ ಖಾತ್ರಿ ಯೋಜನೆ

ತುಮಕೂರು, ಮಾ.27-ಬಡವರು ಮತ್ತು ಶ್ರೀಮಂತರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಕಾಂಗ್ರೆಸ್ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಘೋಷಿಸಿದ್ದು, 5 ಕೋಟಿ ಕುಟುಂಬ ಹಾಗೂ 25 ಕೋಟಿ ಜನರಿಗೆ ಇದು ವರದಾನವಾಗಲಿದೆ ಎಂದು ಕೆಪಿಸಿಸಿ ವಕ್ತಾರ ಮುರಳೀಧರ್ ಹಾಲಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತದ ಜನಸಂಖ್ಯೆಯಲ್ಲಿ ಶೇ.20ರಷ್ಟು ಜನತೆಗೆ ಈ ಯೋಜನೆ ಸದುಪಯೋಗವಾಗಲಿದ್ದು, ವಾರ್ಷಿಕ 75 ಸಾವಿರ ರೂ.ನಂತೆ, ತಿಂಗಳಿಗೆ 6 ಸಾವಿರ ರೂ.ಗಳನ್ನು ಬಡ ಕುಟುಂಬದ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದರು.

ಮುಂದಿನ ಪ್ರಧಾನಮಂತ್ರಿ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಮ್ಮ ಪ್ರಧಾನಿ ರಾಹುಲ್‍ಗಾಂಧಿಯವರೇ.ದೇಶದ ಬಹುತೇಕ ಜನರ ಅಭಿಪ್ರಾಯವೂ ಇದೇ ಆಗಿದೆ. ಅಮೇಥಿಯಲ್ಲಿ ಗೆಲ್ಲಲಾಗದೆ ಕೇರಳ ಅಥವಾ ಕರ್ನಾಟಕಕ್ಕೆ ವಲಸೆ ಬರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ವಕ್ತಾರರು, ಅಮೇಥಿಯಲ್ಲಿ ಗೆಲ್ಲಲಾಗುವುದಿಲ್ಲ ಎಂದು ಹೋಗುತ್ತಿಲ್ಲ. ದಕ್ಷಿಣ ಭಾರತ ಹಾಗೂ ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಪಕ್ಷಕ್ಕೆ ಇನ್ನಷ್ಟು ಆನೆಬಲ ಬಂದಂತಾಗುತ್ತದೆ ಎಂಬ ಕಾರಣಕ್ಕಾಗಿ ಬರುತ್ತಿದ್ದಾರೆ. ಇದಕ್ಕೆ ಅನ್ಯ ಅರ್ಥ ಕಲ್ಪಿಸುವುದು ಬೇಡ ಎಂದರು.

ಮಾಜಿ ಶಾಸಕ ರಫೀಕ್ ಅಹಮ್ಮದ್ ಮಾತನಾಡಿ, ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.ಅದೇ ರೀತಿ ಲೋಕಸಭೆ ಚುನಾವಣೆಯಲ್ಲೂ ಸಹ ಗೆಲುವು ಸಾಧಿಸಲಿದೆ.ಕರ್ನಾಟಕದಲ್ಲಿ ಮೈತ್ರಿಗೆ ಹೆಚ್ಚು ಸ್ಥಾನ ದೊರೆಯಲಿದೆ ವಿಶ್ವಾಸ ನಮ್ಮಲ್ಲಿದೆ ಎಂದರು.

ಈ ಬಾರಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.ಸತತ ಆರು ತಿಂಗಳ ಕಾಲ ಪಕ್ಷದ ವರಿಷ್ಠರು ದೇಶಾದ್ಯಂತ ಸಂಚರಿಸಿ ಜನರೊಂದಿಗೆ ಚರ್ಚಿಸಿ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಘೋಷಿಸಿದ್ದಾರೆ. ಬಂಡಾಯ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ನಾಮಪತ್ರ ವಾಪಸ್ ಪಡೆಯುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ. ಒಂದು ವೇಳೆ ವಾಪಸ್ ಪಡೆಯಲಿಲ್ಲವೆಂದರೆ ಮುಂದಿನ ನಿರ್ಧಾರವನ್ನು ಪಕ್ಷದ ಮುಖಂಡರು ಕೈಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ವಕ್ಫ್ ಬೋರ್ಡ್ ಅಧ್ಯಕ್ಷ ಮಸ್ತಕ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ