ಸಂಸದ ಮುದ್ದಹನುಮೇಗೌಡ ಮತ್ತು ಬಂಡಾಯ ಅಭ್ಯರ್ಥಿ ರಾಜಣ್ಣ ಮನವೊಲಿಕೆಗೆ ಯತ್ನ

ತುಮಕೂರು, ಮಾ.27-ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಂಸದ ಮುದ್ದಹನುಮೇಗೌಡ ಹಾಗೂ ಬಂಡಾಯ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ಮನವೊಲಿಕೆ ಯತ್ನ ಮುಂದುವರೆದಿದೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನಿನ್ನೆ ತಡರಾತ್ರಿ ಮುದ್ದಹನುಮೇಗೌಡರನ್ನು ಭೇಟಿ ಮಾಡಿ ನಾಮಪತ್ರ ಹಿಂಪಡೆಯುವಂತೆ ಕೋರಿದ್ದಾರೆ.

ಜೊತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಕೂಡ ಮುದ್ದ ಹನುಮೇಗೌಡರನ್ನು ಸಂಪರ್ಕಿಸಲು ನಾಮಪತ್ರ ಹಿಂಪಡೆಯಲು ಮನವಿ ಮಾಡಿದ್ದಾರೆ.

ಪರಮೇಶ್ವರ್ ಅವರ ಮನವಿಗೆ ಪ್ರತಿಕ್ರಿಯಿಸಿದ ಮುದ್ದಹನುಮೇಗೌಡ, ನಾನು ಮೊದಲು ಕಾರ್ಯಕರ್ತರು, ನನ್ನ ಅಭಿಮಾನಿಗಳೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ. ಸದ್ಯಕ್ಕೆ ನಾಮಪತ್ರ ವಾಪಸ್ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷ ನಿಮಗೆ ಎಲ್ಲವನ್ನೂ ಕೊಟ್ಟಿದೆ.ಇನ್ನು ಮುಂದೆಯೂ ಸಾಕಷ್ಟು ಅವಕಾಶಗಳು ಸಿಗಲಿವೆ. ಆತುರಪಟ್ಟು ನಿರ್ಧಾರ ಕೈಗೊಳ್ಳುವುದು ಬೇಡ.ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಿಮ್ಮ ಬಗ್ಗೆ ಅಪಾರ ಗೌರವ ಇಟ್ಟಿದ್ದಾರೆ.ಉತ್ತಮ ಸಂಸದೀಯ ಪಟುವಾಗಿದ್ದೀರಿ.

ಪಕ್ಷದ ಮನವಿಗೆ ಮನ್ನಣೆ ನೀಡಬೇಕೆಂದು ಜಿ.ಪರಮೇಶ್ವರ್ ಕೋರಿದರೆಂದು ಮಾಹಿತಿ ಲಭ್ಯವಾಗಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ಸಭೆ ನಡೆಯಲಿದ್ದು ಮುದ್ದಹನುಮೇಗೌಡರ ಮನವೊಲಿಕೆ ಯತ್ನ ಮುಂದುವರೆಯಲಿದೆ.

ಕೆ.ಎನ್.ರಾಜಣ್ಣ ಅವರು ನಾಮಪತ್ರ ಹಿಂಪಡೆಯುವ ಬಗ್ಗೆ ಜಿ.ಪರಮೇಶ್ವರ್ ಅವರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ