ಬೆಂಗಳೂರು,ಮಾ.27- ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದೆ. ವಾಪಸ್ ಪಡೆಯಲು ಇನ್ನೆರಡೇ ದಿನ ಬಾಕಿ ಉಳಿದಿದ್ದು, ಬಂಡಾವೆದ್ದವರ ಮನವೊಲಿಸಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಮಾಡುವ ಪ್ರಯತ್ನವನ್ನು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳು ಮುಂದುವರೆಸಿವೆ.
ಟಿಕೆಟ್ ಹಂಚಿಕೆಯಿಂದಾಗಿ ಉಂಟಾದ ಒಳ ಬೇಗುದಿಯನ್ನು ಶಮನಗೊಳಿಸಲು ಹಲವೆಡೆ ಕಣದಲ್ಲಿ ನಿಂತಿರುವ ಬಂಡಾಯ ಅಭ್ಯರ್ಥಿಗಳನ್ನು ಸಮಾಧಾನಗೊಳಿಸುವ ಯತ್ನ ನಡೆಯುತ್ತಿದೆ. ಒಂದೆಡೆ ಪ್ರಚಾರ ಬಿರುಸುಗೊಂಡಿದ್ದರೆ, ಹಲವು ಕ್ಷೇತ್ರಗಳಲ್ಲಿ ಬಂಡಾಯವನ್ನು ಹತ್ತಿಕ್ಕುವ ಕಾರ್ಯಕ್ಕೆ ಮುಖಂಡರು ಮುಂದಾಗಿ ಸಮಾಲೋಚನೆಯಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ತುಮಕೂರು, ಚಿಕ್ಕಮಗಳೂರಿನಲ್ಲಿ ನೇರಾ ನೇರ ಬಂಡಾಯ ಎದುರಿಸುತ್ತಿದ್ದರೆ, ಕೋಲಾರದಲ್ಲಿದಲ್ಲಿ ಒಳ ಬೇಗುದಿ ಎದುರಿಸುತ್ತಿದೆ.ಇನ್ನು ಬಿಜೆಪಿಗೆ ಬೆಂಗಳೂರು ದಕ್ಷಿಣ, ಚಿತ್ರದುರ್ಗದಲ್ಲಿ ಹುಟ್ಟಿಕೊಂಡಿರುವ ಒಳ ಬೇಗುದಿ ದೊಡ್ಡ ಪ್ರಮಾಣದಲ್ಲಿ ಕಾಡಲಿದೆ.ಇದಲ್ಲದೆ, ಕೋಲಾರದಲ್ಲಿ ಬಿಜೆಪಿಗೆ ಬಂಡಾಯದ ಭೀತಿ ಉಂಟಾಗಿದೆ ಹೀಗಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪಕ್ಷದ ಮುಖಂಡರು ಹರಸಾಹಸ ಪಡುತ್ತಿದ್ದಾರೆ.
ತುಮಕೂರಿನಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವ ಮುದ್ದಹನುಮೇಗೌಡ ಮತ್ತು ರಾಜಣ್ಣ ಅವರ ಜೊತೆ ಕಾಂಗ್ರೆಸ್ ವರಿಷ್ಠರು ಮಾತುಕತೆಗೆ ಮುಂದಾಗಿದ್ದು ಎಲ್ಲವೂ ಸುಖಾಂತ್ಯವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದನ್ನು ವಿರೋಧಿಸಿ ಎಐಸಿಸಿ ಸದಸ್ಯ ಅಮೃತ್ ಶೆಣೈ ನಾಮಪತ್ರ ಸಲ್ಲಿಸಿದ್ದಾರೆ.ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆದಿದ್ದು, ಅದು ಯಶಸ್ವಿಯಾಗುವ ವಿಶ್ವಾಸವನ್ನು ಮೈತ್ರಿ ಕೂಟ ಹೊಂದಿದೆ.
ಬಂಡಾಯವು ಬಿಜೆಪಿಯನ್ನೂ ಬಿಟ್ಟಿಲ್ಲ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಎಸ್.ಮುನಿಸ್ವಾಮಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಡಿ.ಎಸ್.ವೀರಯ್ಯ ನಾಮಪತ್ರ ಸಲ್ಲಿಸಿದ್ದಾರೆ. ವೀರಯ್ಯ ಎರಡು ಬಾರಿ ಕಾಂಗ್ರೆಸ್ ವಿರುದ್ಧ ಕಡಿಮೆ ಅಂತರದಲ್ಲಿ ಸೋತಿದ್ದು ಸುಮಾರು 3 ಲಕ್ಷದಷ್ಟುಮತಗಳನ್ನು ಪಡೆದಿದ್ದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹತ್ತಿರದವರಾಗಿದ್ದರಿಂದ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದರು.ಆದರೆ, ಪಕ್ಷವು ಮುನಿಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಸಿಡಿದೆದ್ದು ವೀರಯ್ಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇದಿಷ್ಟು ಬಂಡಾಯ ಅಭ್ಯರ್ಥಿಗಳದ್ದಾದರೆ, ಭಿನ್ನಮತ ಕೂಡ ಎಲ್ಲ ಪಕ್ಷಗಳಿಗೂ ಕಾಡುತ್ತಿದೆ.ಬಿಜೆಪಿ ಪಾಲಿಗೆ ತೀವ್ರ ಒಳ ಬೇಗುದಿ ಕಂಡು ಬಂದಿರುವುದು ಬೆಂಗಳೂರು ದಕ್ಷಿಣ ಹಾಗೂ ಚಿತ್ರದುರ್ಗದಲ್ಲಿ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನೇರಾನೇರ ಬಂಡಾಯ ಕಂಡು ಬಂದಿಲ್ಲ. ಆದರೆ, ಒಳ ಬೇಗುದಿ ಮಾತ್ರ ತೀವ್ರವಾಗಿದೆ.ಕೇಂದ್ರ ಸಚಿವ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಆಕಾಂಕ್ಷಿಯಾಗಿದ್ದ ಈ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್ ಅನ್ನು ತೇಜಸ್ವಿ ಸೂರ್ಯ ಎಂಬ ಯುವ ನಾಯಕನಿಗೆ ನೀಡಲಾಗಿದೆ.ಇದು ಟಿಕೆಟ್ ದೊರೆಯುವ ಖಾತರಿ ಹೊಂದಿದ್ದ ತೇಜಸ್ವಿನಿ ಅನಂತಕುಮಾರ್ ಅವರಿಗೆ ಮಾತ್ರವಲ್ಲ, ರಾಜ್ಯ ಬಿಜೆಪಿ ಘಟಕಕ್ಕೂ ಅಚ್ಚರಿಯ ಬೆಳವಣಿಗೆಯಾಗಿದೆ.ಸಹಜವಾಗಿಯೇ ಇದು ಪಕ್ಷದಲ್ಲಿ ಭಾರಿ ಪ್ರಮಾಣದಲ್ಲಿ ಒಳ ಬೇಗುದಿಯನ್ನು ಹುಟ್ಟುಹಾಕಿದೆ.
ಇನ್ನು ಚಿತ್ರದುರ್ಗದಲ್ಲಿ ಯಾವುದೇ ಬಂಡಾಯಗಳು ಕಂಡಿಲ್ಲ. ಆದರೆ ಭೋವಿ ಸಮುದಾಯಕ್ಕೆ ಟಿಕೆಟ್ ನೀಡದೇ ಇರುವುದರ ಬಗ್ಗೆ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಅಸಮಾಧಾನಗೊಂಡಿದ್ದು ಬಿಜೆಪಿ ವಿರುದ್ಧ ಮತ ಹಾಕುವ ಇಂಗಿತ ವ್ಯಕ್ತಪಡಿಸಿದ್ದಾರೆ.ಈ ಕ್ಷೇತ್ರದಲ್ಲಿ ಬಿಜೆಪಿಯ ಇಬ್ಬರು ಶಾಸಕರಾದ ಗೂಳಿಹಟ್ಟಿಶೇಖರ್‍ಹಾಗೂ ಚಂದ್ರಪ್ಪ ಅವರು ಇದೇ ಸಮುದಾಯಕ್ಕೆ ಸೇರಿದವರು.ಸಮುದಾಯದ ಸ್ವಾಮೀಜಿ ಬಿಜೆಪಿ ವಿರುದ್ಧ ನಿಂತಿರುವುದರಿಂದ ಈ ಶಾಸಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.ಈ ಶಾಸಕರು ಬಿಜೆಪಿಯ ಅಭ್ಯರ್ಥಿ ಎ. ನಾರಾಯಸ್ವಾಮಿ ಪರ ಕೆಲಸ ಮಾಡಿದರೆ ಸಮುದಾಯದ ಆಕ್ರೋಶಕ್ಕೆ ಸಿಲುಕಬೇಕಾಗುತ್ತದೆ.ಹಾಗಂತ ಕೆಲಸ ಮಾಡದಿದ್ದರೆ ಪಕ್ಷದ ಸಿಟ್ಟಿಗೆ ಬಲಿಯಾಗಬೇಕಾಗುತ್ತದೆ.ಈ ದ್ವಂದ್ವವನ್ನು ಶಾಸಕರು ಹೇಗೆ ನಿವಾರಿಸುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ಇನ್ನು ಕೋಲಾರದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷಗಳ ಅಭ್ಯರ್ಥಿಯಾಗಿರುವ ಕೆ.ಎಚ್.ಮುನಿಯಪ್ಪ ವಿರುದ್ಧ ಕಾಂಗ್ರೆಸ್‍ನ ನಾಲ್ವರು ಮತ್ತು ಜೆಡಿಎಸ್‍ನ ಒಬ್ಬರು ತಿರುಗಿ ಬಿದ್ದಿದ್ದಾರೆ.ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ಈ ಐದು ಮಂದಿ ಶಾಸಕರು ಮತ್ತು ಕೆಲ ಮಾಜಿ ಶಾಸಕರು ದೆಹಲಿಯಲ್ಲಿ ಲಾಬಿ ನಡೆಸಿ ಹೈಕಮಾಂಡ್ ಗಮನಕ್ಕೂ ತಮ್ಮ ವಿರೋಧ ವ್ಯಕ್ತಪಡಿಸಿದ್ದರು.ಆದರೆ ಮುನಿಯಪ್ಪ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಇಷ್ಟಾಗಿಯೂ ತಣ್ಣಗಾಗದ ಭಿನ್ನಮತೀಯ ಶಾಸಕರು ಮುನಿಯಪ್ಪ ಅವರ ವಿರುದ್ಧ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದು ಇದರ ಲಾಭ ಬಿಜೆಪಿ ಪಾಲಾಗುವ ನಿರೀಕ್ಷೆ ಇದೆ.ಇದು ಕಾಂಗ್ರೆಸ್ ವಲಯದಲ್ಲಿ ಆತಂಕವನ್ನು ಸೃಷ್ಟಿಮಾಡಿದೆ.
ಅಬ್ಬರದ ಪ್ರಚಾರ: ಈ ನಡುವೆ ರಾಜ್ಯದೆಲ್ಲೆಡೆ ರಣಬಿಸಿಲಿನ ನಡುವೆ ಚುನಾವಣಾ ಕಾವು ರಂಗೇರತೊಡಗಿದೆ. ಮೈತ್ರಿ ಒಳಬೇಗುದಿ, ಭಿನ್ನಮತ, ಬಂಡಾಯದ ನಡುವೆಯೂ ಚುನಾವಣಾ ಪ್ರಚಾರ ಕಾವು ಪಡೆದುಕೊಳ್ಳತೊಡಗಿದೆ.ಮೈಸೂರು, ಮಂಡ್ಯ, ಹಾಸನ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ ಬಹುತೇಕ ಕಡೆ ಪಕ್ಷದ ಧ್ವಜಗಳನ್ನು ಹಿಡಿದು ಕಾರ್ಯಕರ್ತರು ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ.