ನೀತಿಸಂಹಿತೆ ಉಲ್ಲಂಘನೆ; ನಿಖಿಲ್ ವಿರುದ್ಧ ಮಂಡ್ಯದಲ್ಲಿ 3 ದೂರು​ ದಾಖಲು

ಮಂಡ್ಯ: ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೃಹತ್​ ಸಮಾವೇಶ ನಡೆಸಿದ್ದ ಜೆಡಿಎಸ್​ ವಿರುದ್ಧ 3 ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ.

ಸಮಾವೇಶದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್​ ವಿರುದ್ಧ 3 ಪ್ರತ್ಯೇಕ ಎಫ್​ಐಆರ್​ ದಾಖಲಿಸಲಾಗಿದೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದ್ದು,  ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎನ್ನಲಾಗಿದೆ. ಪ್ಲೈಯಿಂಗ್ ಸ್ಕ್ವಾಡ್ ರವಿ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

ದೂರುಗಳಲ್ಲಿ ಏನಿದೆ?:
ಕಾವೇರಿ ವನದಲ್ಲಿ ಹೂ ಕುಂಡಗಳು, ಹೂವಿನ ಗಿಡಗಳು, ಪೌಂಟೇನ್, ವಿದ್ಯುತ್ ಸಂಪರ್ಕಗಳು, ಲಾನ್ ತುಳಿದು ಹಾಳು ಮಾಡಲಾಗಿದೆ. ಕಾಂಪೌಂಡ್ ನಿರ್ಮಾಣ ಹಂತದಲ್ಲಿದ್ದ ಪೋಲ್ಸ್ ಕೆಡವಿ ಸುಮಾರು 8 ಲಕ್ಷ ರೂ. ಹಾನಿಯಾಗಿದೆ ಎಂದು ದೂರು ನೀಡಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್​ 427, ಪ್ರಿವೆನ್ಷನ್ ಆಫ್​ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್ 1984ರ ಕಲಂ 3ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2ನೇ ದೂರಿನಲ್ಲಿ ಮಂಡ್ಯದ ಸಂಜಯ ವೃತ್ತದಲ್ಲಿ ಅನುಮತಿ ಪಡೆಯದೆ ಹಸಿರು, ಬಿಳಿ ಬಣ್ಣದ ಪೇಪರ್ ಚೂರುಗಳನ್ನು ಸಿಡಿಸಿ ಮನರಂಜನೆ ಕೊಟ್ಟು ಮತದಾರರನ್ನು ಸೆಳೆಯಲು ಆಮಿಷವೊಡ್ಡಿದ್ದಾರೆ ಎಂದು ಕಸಬಾ 1ರ ಪ್ಲೈಯಿಂಗ್ ಸ್ಕ್ವಾಡ್ ಸುಧಾಮ ದೂರು ನೀಡಿದ್ದಾರೆ. ದೂರಿನ ಅನ್ವಯ ಐಪಿಸಿ 143, 342, ಆರ್.ಡಬ್ಲ್ಯೂ 149 ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ.

3ನೇ ದೂರಿನಲ್ಲಿ ಮಂಡ್ಯದ ಕಾವೇರಿ ವನದ ಎದುರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಮಧ್ಯಾಹ್ನ 2.30ರಿಂದ ಸಂಜೆ 4 ಗಂಟೆ ತನಕ ನಿಂತು ಸಂಚಾರಕ್ಕೆ ಅಡ್ಡಿ ಉಂಟು ಮಾಡಲಾಗಿದೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಕ್ವಾಡ್ ಸುಧಾಮ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಎಫ್​ಐಆರ್​ ದಾಖಲಿಸಲಾಗಿದೆ.

ಸೋಮವಾರ ಬಹಳ ಅದ್ದೂರಿಯಾಗಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸಿದ್ದ ಜೆಡಿಎಸ್​ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇಂದು ಮತ್ತೆ ಮಂಡ್ಯಕ್ಕೆ ಸಿಎಂ:
ಮಂಡ್ಯ ಲೋಕಸಭಾ ಸ್ಪರ್ಧಿಯಾಗಿರುವ ಮಗ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಸಿಎಂ ಕುಮಾರಸ್ವಾಮಿ ಆ ಕ್ಷೇತ್ರದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಕಳೆದ 2 ದಿನಗಳಿಂದ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಮಂಡ್ಯದಲ್ಲಿ ಜೆಡಿಎಸ್​ ವಿರುದ್ಧ ಮುನಿಸಿಕೊಂಡಿರುವ ಸ್ಥಳೀಯ ಕಾಂಗ್ರೆಸ್​ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಮಂಡ್ಯ ಜಿಲ್ಲಾ ಪ್ರವಾಸ ಮಾಡಲಿರುವ ಸಿಎಂ ಕುಮಾರಸ್ವಾಮಿ  ಮಧ್ಯಾಹ್ನದಿಂದ ರಾತ್ರಿವರೆಗೂ ಮಂಡ್ಯದಲ್ಲೇ ರಾಜಕೀಯ ಸಮಾಲೋಚನೆ ನಡೆಸಲಿದ್ದಾರೆ. ಚುನಾವಣೆ ಸಂಬಂಧ ಜೆಡಿಎಸ್, ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿ,  ಮಂಡ್ಯ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸಕೈಗೊಳ್ಳಲಿದ್ದಾರೆ. ದೋಸ್ತಿ ಪಕ್ಷವಾದ ಕಾಂಗ್ರೆಸ್ ನಾಯಕರ ಮನೆಗಳಿಗೆ ಭೇಟಿ ನೀಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ