ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಆರು ವಾರಗಳ ಜಾಮೀನು ನೀಡಿದ ಕೋರ್ಟ್

ಇಸ್ಲಾಮಾಬಾದ್, ಮಾ.27- ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪಾಕ್ ಸುಪ್ರೀಂ ಕೋರ್ಟ್ ಅವರಿಗೆ 6ವಾರಗಳ ಜಾಮೀನು ನೀಡಿದೆ.

ಜೈಲು ಸೇರಿದ 3ತಿಂಗಳ ಬಳಿಕ ನವಾಜ್ ಅನಾರೋಗ್ಯದ ಕಾರಣ ಜಾಮೀನಿನ ಮೇಲೆ ಹೊರ ಬಂದು ಚಿಕಿತ್ಸೆ ಪಡೆಯಲಿದ್ದಾರೆ.

69 ವರ್ಷದ ನವಾಜ್ ಷರೀಫ್ ಅವರು ಅಲ್-ಅಝಿಝಿಯಾ ಸ್ಟೀಲ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 7ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಕಳೆದ ವರ್ಷ ಡಿಸೆಂಬರ್‍ನಿಂದ ಜೈಲಿನಲ್ಲಿದ್ದಾರೆ.

ಜೈಲಿನಲ್ಲಿರುವ ನವಾಜ್ ಷರೀಫ್ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಫೆಬ್ರವರಿ 25ರಂದು ವಜಾಗೊಳಿಸಿತ್ತು.

ಹೈಕೋಟ್ ಆದೇಶದ ವಿರುದ್ಧ ಪಾಕ್ ಮಾಜಿ ಪ್ರಧಾನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವೈದ್ಯಕೀಯ ಚಿಕಿತ್ಸೆಗಾಗಿ ಆರು ವಾರಗಳ ಕಾಲ ನವಾಜ್ ಷರೀಫ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೆ ದೇಶಬಿಟ್ಟು ಹೋಗುವಂತಿಲ್ಲ ಎಂಬ ಷರತ್ತು ವಿಧಿಸಿದೆ.

ಅವೆನ್ಫೀಲ್ಡ್ ಪ್ರಾಪರ್ಟಿಸ್, ಫ್ಲಾಗ್ಶಿಪ್ ಇನ್‍ವೆಸ್ಟ್‍ಮೆಂಟ್ ಹಾಗೂ ಅಲ್-ಅಝಿಝಿಯಾ ಈ ಮೂರು ಭ್ರಷ್ಟಾಚಾರ ಪ್ರಕರಣಗಳು ನವಾಜ್ ಕೊರಳು ಸುತ್ತಿಕೊಂಡಿದ್ದು, 2017ರ ಜುಲೈನಲ್ಲಿ ಪನಾಮ ಪೇಪರ್ಸ್ ಹಗರಣದಲ್ಲಿ ಸುಪ್ರೀಂಕೋರ್ಟ್ ನವಾಜ್ ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ