ನೆಲಮಂಗಲ, ಮಾ.27- ಬಯಲುಸೀಮೆ ಪ್ರದೇಶಗಳಿಗೆ ನೀರೊದಗಿಸುವ ಮಹತ್ವಾಕಾಂಕ್ಷೆ ಯೋಜನೆಯಾದ ಎತ್ತಿನಹೊಳೆ ಯೋಜನೆ ಕಾಮಗಾರಿ ಶೇ.65ರಷ್ಟು ಪೂರ್ಣಗೊಂಡಿದ್ದು, ಇನ್ನೆರಡು ವರ್ಷಗಳಲ್ಲಿ ನೀರು ಹರಿಯಲಿದೆ ಎಂದು ಕೃಷಿ ಸಚಿವ ಶಿವಶಂಕರ್ರೆಡ್ಡಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಪ್ಪಮೊಯ್ಲಿ ಅವರು ಬಯಲು ಸೀಮೆಗೆ ಎತ್ತಿನಹೊಳೆ ನೀರನ್ನು ಹರಿಸಬೇಕೆಂಬ ಮಹದಾಸೆ ಹೊಂದಿದ್ದು, ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.ಅವರ ಕನಸು ಇನ್ನೆರಡು ವರ್ಷಗಳಲ್ಲಿ ಈಡೇರಲಿದೆ ಎಂದರು.
ಮೈತ್ರಿ ಪಕ್ಷಗಳು ರಾಜ್ಯದಲ್ಲಿ 22 ಸ್ಥಾನ ಗೆದ್ದೇ ಗೆಲ್ಲುತ್ತವೆ. ಬಿಜೆಪಿಯವರು ಮೋದಿ ಅಲೆಯ ಗುಂಗಿನಲ್ಲಿದ್ದಾರೆ.ಮೋದಿ ನೀಡಿರುವ ಭರವಸೆಗಳು ಭರವಸೆಯಾಗಿಯೇ ಉಳಿದಿವೆ. ಯಾವುವೂ ಈಡೇರಿಲ್ಲ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಮೈತ್ರಿ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶ್ರೀನಿವಾಸಮೂರ್ತಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಂಎಲ್ಸಿ ರವಿ, ಬೆಮೆಲ್ ಕಾಂತರಾಜು ಸೇರಿದಂತೆ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಇದ್ದರು.