ಬೆಂಗಳೂರು,ಮಾ.27-ಬಾಹ್ಯಾಕಾಶದ ಸರ್ಜಿಕಲ್ ಸ್ಟ್ರೈಕ್ನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳಬೇಕಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜ್ಞಾನಿಗಳು ಮಾಡಿರುವ ಸಾಧನೆ ಇದು.ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆಯೇ?ಎಂದರು.
ಯಾವುದೇ ಸರ್ಕಾರವಿದ್ದರೂ ವಿಜ್ಞಾನಿಗಳ ಪಡೆ ಅವರ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ.ಅವರ ಸಾಧನೆಯನ್ನು ಬಳಸಿಕೊಂಡು ಚುನಾವಣೆಯಲ್ಲಿ ಲಾಭ ಪಡೆಯಬೇಕಾ ಎಂದು ಪ್ರಶ್ನಿಸಿದರು.
ವಿಜ್ಞಾನಿಗಳ ಸಾಧನೆಯನ್ನು ತಾವೇ ಮಾಡಿರುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿರುವುದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ ಎಂದು ಟೀಕಿಸಿದರು.
ಚಿತ್ರನಟ ದರ್ಶನ್ ಅವರಿಗೆ ಡಿ ಬಾಸ್ ಎಂಬ ಬಿರುದನ್ನು ಆರೂವರೆ ಕೋಟಿ ಜನರು ನೀಡಿದ್ದಾರೆಯೇ?ಕೆಲವು ಅಭಿಮಾನಿಗಳು ಕೊಟ್ಟಿರುವ ಬಿರುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೂ ಯುವರಾಜ ಎಂಬ ಬಿರುದು ಕೊಟ್ಟಿದ್ದಾರೆ. ಆದರೆ ಅವನೀಗ ಯುವರಾಜನಾ ಎಂದು ಮರುಪ್ರಶ್ನೆ ಹಾಕಿದರು.
ಬಿರುದು ನೀಡಿದ ಮಾತ್ರಕ್ಕೆ ನಾವು ದೊಡ್ಡದಾಗಿ ಮೆರೆಯೋಕೆ ಆಗುತ್ತದೆಯೇ ಎಂದ ಅವರು, ಮಾಜಿ ಸಚಿವ ದಿವಂಗತ ಅಂಬರೀಶ್ ಅವರ ಹೆಸರನ್ನು ತಾವು ಬಳಸುತ್ತಿಲ್ಲ. ತಾವು ಮಾಡಿರುವ ಕಾರ್ಯದ ಹೆಸರಿನಲ್ಲಿ ಮತ ಯಾಚನೆ ಮಾಡುತ್ತಿರುವುದಾಗಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.