ಬೆಂಗಳೂರು, ಮಾ.26- ವ್ಯಕ್ತಿಗಿಂತ ದೇಶ ಮುಖ್ಯಎಂಬ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದ್ದೇನೆ. ಹೀಗಾಗಿ ನನಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ ಎಂದು ತೇಜಸ್ವಿನಿ ಅನಂತಕುಮಾರ್ ಸ್ಪಷ್ಟಪಡಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ದೊರಕುವ ಭರವಸೆಯ ಹಿನ್ನೆಲೆಯಲ್ಲಿ ಈಗಾಗಲೇ ತೇಜಸ್ವಿನಿ ಅವರು ಪ್ರಚಾರ ಆರಂಭಿಸಿದ್ದರು.ಆದರೆ ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ತೇಜಸ್ವಿನಿ ಬದಲಿಗೆ ಯುವ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.
ತಮಗೆ ಟಿಕೆಟ್ ಖಚಿತವಾಗುತ್ತಿದ್ದಂತೆ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮತ್ತಿತರ ಮುಖಂಡರೊಂದಿಗೆ ತೇಜಸ್ವಿನಿ ಅನಂತಕುಮಾರ್ ನಿವಾಸಕ್ಕೆ ಆಗಮಿಸಿ ತೇಜಸ್ವಿ ಸೂರ್ಯ ಅವರು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಕ್ಷೇತ್ರಕ್ಕಾಗಿ ದುಡಿದ ಅನಂತಕುಮಾರ್ ಅವರನ್ನೇ ಮಾದರಿಯಾಗಿಟ್ಟುಕೊಂಡು ಕೆಲಸ ಮಾಡುತ್ತೇನೆ. ನನಗೆ ನಿಮ್ಮ ಬೆಂಬಲ ಬೇಕು ಎಂದು ತೇಜಸ್ವಿ ಸೂರ್ಯ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರ ಬೆಂಬಲಿಗರು ತೇಜಸ್ವಿ ಸೂರ್ಯ ವಿರುದ್ಧ ಘೋಷಣೆ ಕೂಗಿದರು.
ಈ ಮುಂಚೆ ನಿಗದಿಯಾದಂತೆ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬೇಕು.ತೇಜಸ್ವಿ ಗೋ ಬ್ಯಾಕ್ ಎಂದು ಪಟ್ಟು ಹಿಡಿದರು.
ಆಕ್ರೋಶಗೊಂಡ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ ತೇಜಸ್ವಿನಿ ಅನಂತಕುಮಾರ್ ಅವರು ನಾವು ಅನಂತಕುಮಾರ್ ಅವರ ಕಾಲದಿಂದಲೂ ಪಕ್ಷದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ನಮಗೆ ವ್ಯಕ್ತಿಗಿಂತ ದೇಶ ಮುಖ್ಯ.ಹೀಗಾಗಿ ಪಕ್ಷದ ವರಿಷ್ಠರು ಸೂಚಿಸಿರುವ ತೇಜಸ್ವಿ ಸೂರ್ಯ ಅವರ ಪರ ಕೆಲಸ ಮಾಡೋಣ ಎಂದರು.
ಕಾರಿಗೆ ಮುತ್ತಿಗೆ: ತೇಜಸ್ವಿನಿ ಅವರ ಹೇಳಿಕೆ ನಂತರವೂ ಆಕ್ರೋಶಿತರಾಗಿದ್ದ ಕೆಲ ಕಾರ್ಯಕರ್ತರು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಕಾರಿಗೆ ಮುತ್ತಿಗೆ ಹಾಕಿ ಕೆಲ ಕಾಲ ಪ್ರತಿಭಟನೆ ನಡೆಸಿದರು.