ಬೆಂಗಳೂರು, ಮಾ.26- ಲೋಕಸಭೆ ಚುನಾವಣೆಯ ಜಂಟಿ ಪ್ರಚಾರಕ್ಕೆ ದೋಸ್ತಿ ಪಕ್ಷಗಳು ಮಾ.31ರಂದು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯುವ ಬೃಹತ್ ಸಮಾವೇಶದ ಮೂಲಕ ಚಾಲನೆ ನೀಡಲಿವೆ. ಅದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಮಾ.31ರಂದು ಚಾಲನೆ ನೀಡಲಿದ್ದಾರೆ.
ಈ ಮೊದಲು ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಎರಡು ಪಕ್ಷಗಳ ಮುಖಂಡರು ಸಮಾವೇಶದ ದಿನಾಂಕ ಪ್ರಕಟಿಸಿದ್ದರು, ಸ್ಥಳ ಮತ್ತು ಸಮಯ ನಿಗದಿಯಾಗಿರಲಿಲ್ಲ.
ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸ್ಥಳ ಮತ್ತು ಸಮಯವನ್ನು ಪ್ರಕಟಿಸಿದ್ದಾರೆ.
ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಬಳಿ ಇರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ಆವರಣದಲ್ಲಿ ಮಾ.31ರಂದು ಮಧ್ಯಾಹ್ನ 3ಗಂಟೆಗೆ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ ರಾಹುಲ್ಗಾಂಧಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಟ್ಟಾಗಿ ಭಾಗವಹಿಸಲಿದ್ದಾರೆ. ಉಳಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಎರಡು ಪಕ್ಷಗಳ ಪ್ರಮುಖ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಜಂಟಿಯಾಗಿ ಕಣಕ್ಕಿಳಿಸಿರುವ ದೋಸ್ತಿ ಪಕ್ಷಗಳು ಜಂಟಿ ಪ್ರಚಾರದ ಮೂಲಕ ಜಾತ್ಯತೀತ ಮತಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದಾರೆ.
ಬಿಜೆಪಿಯನ್ನು ಮಣಿಸಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಗುರಿ ಹೊಂದಿರುವ ಎರಡೂ ಪಕ್ಷಗಳು ಸ್ಥಾನ ಹಂಚಿಕೆಯಲ್ಲಿ ಈಗಾಗಲೇ ಸಾಕಷ್ಟು ಹೊಂದಾಣಿಕೆ ಮಾಡಿಕೊಂಡಿದ್ದು, ಪ್ರಚಾರ ಕಾರ್ಯಕ್ರಮದಲ್ಲೂ ಈ ಮಾಹಿತಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.