ಸಂಸದ ಡಿ.ಕೆ.ಸುರೇಶ್ ದಾಖಲೆಯ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ-ಮುಖ್ಯಮಂತ್ರಿ ಕುಮಾರಸ್ವಾಮಿ

ರಾಮನಗರ,ಮಾ.26- ಸಂಸದ ಡಿ.ಕೆ.ಸುರೇಶ್ ಅವರು ದಾಖಲೆಯ ಮತಗಳ ಅಂತರದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಂಸದ ಡಿ.ಕೆ.ಸುರೇಶ್ ಅವರು ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ಡಾ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್-ಜೆಡಿಎಸ್ ನಾಯಕರು ಮತ್ತು ಮುಖಂಡರು ಒಟ್ಟಾಗಿ ಈ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಕೈಗೊಳ್ಳುತ್ತೇವೆ. ಐದು ಲಕ್ಷಕ್ಕೂ ಹೆಚ್ಚಿನ ಬಹುಮತದಿಂದ ಸುರೇಶ್ ಅವರನ್ನು ಗೆಲ್ಲಿಸಲು ಸಿದ್ದತೆ ಮಾಡಲಾಗುತ್ತಿದೆ ಎಂದರು.

ದೇಶಕ್ಕೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರು ಜಂಟಿ ಪ್ರಚಾರ ಕೈಗೊಳ್ಳುತ್ತೇವೆ ಎಂದರು.

20 ಕ್ಷೇತ್ರಗಳಲ್ಲಿ ಗೆಲುವು:
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ದೇಶಕ್ಕೆ ದೊಡ್ಡ ಸಂದೇಶ ನೀಡುವ ನಿಟ್ಟಿನಲ್ಲಿ ಜೆಡಿಎಸ್-ಕಾಂಗ್ರೆಸ್‍ಒಂದಾಗಿ ಲೋಕಸಭೆ ಚುನಾವಣೆ ಎದುರಿಸುತ್ತಿದ್ದು, ರಾಜ್ಯದ 28 ಕ್ಷೇತ್ರಗಳ ಪೈಕಿ ಮೈತ್ರಿ ಅಭ್ಯರ್ಥಿಗಳು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರದಲ್ಲಿ ಜನರು ಬದಲಾವಣೆ ಬಯಸುತ್ತಿದ್ದು, ಮೈತ್ರಿ ಅಭ್ಯರ್ಥಿಗಳು ದಾಖಲೆ ಅಂತರದಿಂದ ಗೆಲುವು ಸಾಧಿಸಲು ಸಹಕಾರ ನೀಡಬೇಕೆಂದು ಕೋರಿದರು.

ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಮೈತ್ರಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇವೆ.

ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ ಭರವಸೆ ಈಡೇರಿಲ್ಲ. ಬೆಂಗಳೂರು ನಗರ ಸೇರಿದಂತೆ ಸಣ್ಣಪುಟ್ಟ ವ್ಯಾಪಾರಸ್ಥರು ನೋವು ಅನುಭವಿಸುವಂತಾಗಿದೆ ಎಂದ ಅವರು, ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಉಂಟಾಗಿ ಕಾಂಗ್ರೆಸ್‍ನವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿರುವುದನ್ನು ಜನರು ಗಮನಿಸುತ್ತಾರೆ ಎಂದು ಹೇಳಿದರು.

ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಮುನಿರತ್ನ ಮಂಜುನಾಥ್ ಮೊದಲಾದ ಮುಖಂಡರು ಉಪಸ್ಥಿತರಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ