ಬೆಂಗಳೂರು, ಮಾ.26-ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಕಣಕ್ಕಿಳಿದಿರುವ ಜೆಡಿಎಸ್-ಕಾಂಗ್ರೆಸ್ನ ಅಭ್ಯರ್ಥಿಗಳು ಪರಸ್ಪರ ಎರಡೂ ಪಕ್ಷಗಳ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಗೂ ಮುನ್ನ ಹಾವು-ಮುಂಗುಸಿಯಂತೆ ಎದುರುಬದುರಾಗಿರುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಾಯಕರ ನಡುವೆ ಇತ್ತೀಚಿನ ಹೊಂದಾಣಿಕೆ ರಾಜಕೀಯದಲ್ಲಿ ಯಾವಾಗ ಏನುಬೇಕಾದರೂ ಆಗಬಹುದು ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.
ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿ, ಸಿದ್ದರಾಮಯ್ಯ ಅವರು ನನ್ನನ್ನು ಚಿಕ್ಕ ವಯಸ್ಸಿನಿಂದಲೂ ನೋಡಿದ್ದಾರೆ. ಈಗ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನನಗೆ ಅವರ ಆಶೀರ್ವಾದ ಸಿಕ್ಕಿದೆ ಎಂದರು.
ನಂತರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಪ್ರಜ್ವಲ್ ರೇವಣ್ಣ ಭೇಟಿ ಮಾಡಿದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದಿದ್ದೇನೆ. ಕಡೂರು, ಅರಕಲಗೂಡು, ಅರಸೀಕೆರೆ, ಹಾಸನದಲ್ಲಿ ಪ್ರಚಾರಕ್ಕೆ ಬರುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಮಾಜಿ ಸಚಿವ ಎ.ಮಂಜು ಬಗ್ಗೆ ಭಯವಿಲ್ಲ. ಯಾವತ್ತೂ ಕೂಡ ಅವರ ವಿರುದ್ಧ ಮಾತನಾಡಿಲ್ಲ, ಟೀಕಿಸುವುದಿಲ್ಲ. ಜನ ಸೇರಿಸುವುದೇ ದೊಡ್ಡ ವಿಷಯವಲ್ಲ ಎಂದರು.
ಸಿದ್ದರಾಮಯ್ಯ ಅವರು ತಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ತಿಳಿಸಿದರು.
ಮತ್ತೊಂದೆಡೆ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿ ದೇವೇಗೌಡರು ಮತ್ತು ಚೆನ್ನಮ್ಮ ದೇವೇಗೌಡರಿಂದ ಆರ್ಶೀವಾದ ಪಡೆದರು.ಸಚಿವ ಜಮೀರ್ ಅಹಮ್ಮದ್ ಖಾನ್ ಈ ಸಂದರ್ಭದಲ್ಲಿದ್ದರು.