ಮೂರು ಪಕ್ಷಗಳ್ಳಲ್ಲೂ ಜೋರಾದ ಭಿನ್ನಮತ

ಬೆಂಗಳೂರು,ಮಾ.24- ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಎರಡು ದಿನ ಇರುವಾಗಲೇ ಟಿಕೆಟ್ ಕೈ ತಪ್ಪಿದವರು ಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವುದರಿಂದ ಮೂರು ಪ್ರಮುಖ ಪಕ್ಷಗಳಲ್ಲಿ ಭಿನ್ನಮತ ಜೋರಾಗಿದೆ.

ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ನೇತೃತ್ವದಲ್ಲಿ ದೋಸ್ತಿ ಸರ್ಕಾರದಲ್ಲಿ ಭಿನ್ನಮತದ ಕಾವು ಹೆಚ್ಚಾಗಿರುವುದು ಉಭಯ ಪಕ್ಷಗಳ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿಯಲ್ಲೂ ಇದೇ ಪರಿಸ್ಥಿತಿ ಇದೆಯಾದರೂ ದೋಸ್ತಿಗಳಿಗೆ ಹೋಲಿಸಿದರೆ ತುಸು ಕಡಿಮೆ ಎನ್ನಬಹುದು. ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂಬ ಒಂದೇ ಕಾರಣಕ್ಕಾಗಿ ಎಷ್ಟೇ ಅಸಮಾಧಾನ, ಕೋಪತಾಪ ಇದ್ದರೂ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಸಂಪ್ರದಾಯದಂತೆ ಸೋಮವಾರ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಬಹುತೇಕ ಮೂರು ಪಕ್ಷಗಳಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಮಂಗಳವಾರ ಅಷ್ಟು ಶುಭದಾಯಕವಲ್ಲ ಎಂಬ ನಂಬಿಕೆಯಿಂದ ಸೋಮವಾರವೇ ಹೆಚ್ಚಿನ ಪ್ರಮಾಣದಲ್ಲಿ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಆದರೆ ದೋಸ್ತಿ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ ಹೊರತು ಶಮನವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲೂ ತುಮಕೂರು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಳಪತಿಗಳಿಗೆ ದೋಸ್ತಿ ಪಕ್ಷದ ಮುಖಂಡರೇ ಮಗ್ಗಲು ಮುಳ್ಳಾಗಿ ಕಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಚೆಲವರಾಯಸ್ವಾಮಿ ಇದೀಗ ತಮ್ಮ ತವರು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.

ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಇತರೆ ಮುಖಂಡರನ್ನು ಸಂಪರ್ಕಿಸಿರುವ ಅವರು ಜೆಡಿಎಸ್ ವಿರುದ್ಧ ಮತ ಹಾಕಿ ಪಾಠ ಕಲಿಸಬೇಕೆಂದು ಅಖಾಡಕ್ಕಿಳಿದಿದ್ದಾರೆ. ಇದು ಸಹಜವಾಗೇ ಕುಮಾರಸ್ವಾಮಿಗೆ ಅಸಮಾಧಾನವುಂಟು ಮಾಡಿದೆ.

ನಿಮ್ಮ ಪಕ್ಷದ ಕೆಲವು ಮುಖಂಡರು ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಧರ್ಮವನ್ನು ನಾವು ಮಾತ್ರ ಪಾಲಿಸಬೇಕು, ನಿಮ್ಮ ಪಕ್ಷದವರು ನಮ್ಮ ವಿರುದ್ಧವೇ ಕೆಲಸ ಮಾಡಿದರೆ ಜನತೆಗೆ ಏನು ಸಂದೇಶ ಕೊಡಬೇಕೆಂದು ಪ್ರಶ್ನಿಸಿದ್ದಾರೆ.

ಮುಂದುವರೆದ ಗೊಂದಲ:
ತಮ್ಮ ಐದುವರೆ ದಶಕಗಳ ಸುದೀರ್ಘ ರಾಜಕೀಯ ಅನುಭವದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೊದಲ ಬಾರಿಗೆ ರಾಜಕೀಯ ಅಸ್ಥಿರತೆ ಎದುರಿಸುತ್ತಿದ್ದಾರೆ.

ಯಾವ ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೆ ಒಳ್ಳೆಯದು ಎಂಬುದರ ಕುರಿತಂತೆ ಪದ್ಮನಾಭನಗರ ನಿವಾಸದಲ್ಲಿ ಚರ್ಚೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮುಖಂಡರಾದ ಎಂ.ವೀರಪ್ಪ ಮೊಯ್ಲಿ, ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಮತ್ತಿತರರು ಗೌಡರ ಜೊತೆ ಚರ್ಚೆ ನಡೆಸಿದರು.

ತುಮಕೂರಿನ ಜೊತೆ ಬೆಂಗಳೂರು ಉತ್ತರದಿಂದಲೇ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ಮುಖಂಡರ ಗೌಡರ ಮೇಲೆ ಒತ್ತಡ ಹಾಕಿದ್ದಾರೆ. ಅತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ತುಮಕೂರಿನಲ್ಲಿ ಸಂಸದ ಮುದ್ದಹನುಮೇಗೌಡ ಸೋಮವಾರ ನಾಮಪತ್ರ ಸಲ್ಲಿಸಲು ಮುಂದಾಗಿರುವುದು ದೋಸ್ತಿಗಳಲ್ಲಿ ನಡುಕು ಹುಟ್ಟಿಸಿದೆ.

ಬಗೆಹರಿಯದ ಗೊಂದಲ :
ತುಮಕೂರಿನಲ್ಲಿ ದೋಸ್ತಿ ಸರ್ಕಾರದ ಒಮ್ಮತದ ಅಭ್ಯರ್ಥಿ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಮುಂದಾಗಿರುವ ಸಂಸದ ಮುದ್ದಹನುಮೇಗೌಡರ ಮನವೊಲಿಸಲು ಉಪಮುಖ್ಯಮಂತ್ರಿ ಪರಮೇಶ್ವರ್ ನಡೆಸಿದ ಸಂಧಾನ ಫಲಿಸಿಲ್ಲ.

ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ. ಬೇಕಾದರೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇವೆ. ನಮ್ಮ ಪಕ್ಷದವರನ್ನು ಬೆಂಬಲಿಸದವರಿಗೆ ನಾವು ಏಕೆ ಮತ ಹಾಕಬೇಕೆಂದು ಮುದ್ದಹನುಮೇಗೌಡ ಬೆಂಬಲಿಗರು ಪರಮೇಶ್ವರ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಹೀಗಾಗಿ ತುಮಕೂರು ದೋಸ್ತಿ ಪಾಲಿಗೆ ನಿಗಿ ನಿಗಿ ಕೆಂಡದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ