ನಿಖಿಲ್ ನಾಮಪತ್ರಕ್ಕೆ ಸಜ್ಜು: ಟ್ರಾಫಿಕ್ ಜಾಮ್, ನಿಷೇಧಾಜ್ಞೆ ಉಲ್ಲಂಘನೆ; ಕರೆಂಟ್ ಕಟ್ ಮಾಡದಂತೆ ಸೂಚನೆ!

ಮಂಡ್ಯ: ಲೋಕಸಭಾ ಚುನಾವಣಾ ಕಣವು ರಂಗೇರುತ್ತಿದ್ದು, ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸ್ಥಳೀಯ ಕೇಬಲ್ ಟಿವಿ ಪ್ರಸಾರ ವ್ಯವಸ್ಥೆ ಬಂದ್ ಆಗಿತ್ತು. ಇದೀಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ಅನಿಯಮಿತ ವಿದ್ಯುತ್ ಪೂರೈಸುವಂತೆ ವಿದ್ಯುತ್ ನಿಗಮಕ್ಕೆ ಅಧಿಕೃತವಾಗಿಯೇ ಸೂಚನೆ ಹೋಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಂಗಳೂರಿನಿಂದ ಹೊರಟು ಮಂಡ್ಯ ತಲುಪಿ, ನಿಖಿಲ್ ನಾಮಪತ್ರ ಸಲ್ಲಿಸಿದ ಬಳಿಕ ಬೆಂಗಳೂರಿಗೆ ಮರಳುತ್ತಾರೆ. ಈ ಸಂದರ್ಭದಲ್ಲಿ ಆ ದಿನ ಮಂಡ್ಯ ನಗರದಲ್ಲಿ ಅನಿಯಮಿತ ವಿದ್ಯುತ್ ಸರಬರಾಜಿನ ಅವಶ್ಯಕತೆಯಿದೆ. ಆದುದರಿಂದ ಮುಖ್ಯಮಂತ್ರಿ ಪ್ರವಾಸದ ಸಮಯದಲ್ಲಿ ಸೋಮವಾರ ಮದ್ದೂರು ಮತ್ತು ಮಂಡ್ಯ ಪ್ರವಾಸಿ ಮಂದಿರಗಳು, ಮಂಡ್ಯ ಸರಕಾರಿ ಆಸ್ಪತ್ರೆ ಹಾಗೂ ಸಮಾರಂಭ ನಡೆಯುವ ಮಂಡ್ಯ ನಗರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ವಿದ್ಯುತ್ ಸರಬರಾಜು ಮಾಡಬೇಕು. ಮತ್ತು ಈ ಸಂದರ್ಭಗಳಲ್ಲಿ ಈ ಸ್ಥಳಗಳಲ್ಲಿ ಜವಾಬ್ದಾರಿಯುತ, ನುರಿತ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿಕೊಡಬೇಕೆಂದು ಕೋರಿ ಮಂಡ್ಯ ಪೊಲೀಸ್ ಸೂಪರಿಂಟೆಂಡೆಂಟ್ ಸಹಿ ಇರುವ ಪತ್ರವೊಂದನ್ನು ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮಕ್ಕೆ ಕಳುಹಿಸಲಾಗಿದೆ.

ನಿಖಿಲ್ ಕಾರ್ಯಕ್ರಮವನ್ನು ಸುಮಲತಾ ಕಾರ್ಯಕ್ರಮಕ್ಕಿಂತಲೂ ಹೆಚ್ಚು ಯಶಸ್ವಿಯಾಗಿ ಮಾಡಲು ಪಣ ತೊಟ್ಟಿರುವ ಸ್ಥಳೀಯ ಜೆಡಿಎಸ್ ಮುಖಂಡರು, ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕಾಗಿ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಪ್ರತಿಪಕ್ಷಗಳ ಆರೋಪ.

ನಿಷೇಧಾಜ್ಞೆ ಉಲ್ಲಂಘನೆ
ಇಷ್ಟಲ್ಲದೆ, ಮಂಡ್ಯ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ(ಕಲ್ಲುಕಟ್ಟಡ) ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಸಹ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ನಿಷೇಧಾಜ್ಞೆ ಉಲ್ಲಂಘಿಸಲಾಗಿದೆ.

ಪರೀಕ್ಷಾ ಕೇಂದ್ರದ ಆವರಣದಲ್ಲಿ ಮಳವಳ್ಳಿ, ಮದ್ದೂರು ತಾಲೂಕುಗಳಿಂದ ಜೆಡಿಎಸ್ ಕಾರ್ಯಕರ್ತರನ್ನು ಕರೆತಂದ ವಾಹನಗಳಿಗೆ ನಿಲ್ದಾಣ ವ್ಯವಸ್ಥೆ ಕಲ್ಪಿಸಲಾಗಿತ್ತು. ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಯಕರ್ತರು ಪರೀಕ್ಷಾ ಕೇಂದ್ರದ ಆವರಣದಲ್ಲೇ ಸುಮಾರು ಹೊತ್ತು ಕುಳಿತು ಕಾಲ ಕಳೆದರು.

ಸಮಾವೇಶಕ್ಕೆ ಟೀಶರ್ಟ್, ಅಭ್ಯರ್ಥಿ ನಿಖಿಲ್ ಮುಖವಾಡಗಳನ್ನು ಸ್ಥಳದಲ್ಲಿ ತೊಟ್ಟು ಸಿದ್ದರಾಗುತ್ತಿದ್ದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಜೈಕಾರ ಕೂಗುತ್ತಿದ್ದರು. ಇದರಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ