ಬೆಂಗಳೂರು, ಮಾ.24- ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಕೆಲವು ಕ್ಷೇತ್ರಗಳಲ್ಲಿ ಅಸಮಾಧಾನ ಹಾಗೂ ಬಂಡಾಯ ಉಂಟಾಗಿರುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.
ಇಂದು ಬೆಳಗ್ಗೆ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ತಮ್ಮನ್ನು ಹಾಗೂ ಗೌಡರನ್ನು ಭೇಟಿಯಾದ ಕಾಂಗ್ರೆಸ್ ನಾಯಕರನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ದೇವೇಗೌಡರನ್ನು ಭೇಟಿಯಾಗಿದ್ದ ಸಚಿವರಾದ ಶಿವಶಂಕರ್ರೆಡ್ಡಿ, ಜಮೀರ್ ಅಹಮ್ಮದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಮೈತ್ರಿ ಧರ್ಮ ಚುನಾವಣೆಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಅಂಬರೀಶ್ ಅವರ ಪತ್ನಿ, ನಟಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ತುಂಬಾ ಸಂತೋಷ ಎಂದು ಹೇಳಿದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತಂತೆ ಕೆಲವೆಡೆ ಉಂಟಾಗಿರುವ ಬಂಡಾಯವೆಲ್ಲವೂ ಶಮನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷರಾದ ಅಡಗೂರು ಎಚ್.ವಿಶ್ವನಾಥ್ ಅವರು ಕೂಡ ದೇವೇಗೌಡರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ ಮತ್ತಿತರ ಪ್ರಮುಖ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಅಲ್ಲದೆ, ಸಂಸದ ಎಂ.ವೀರಪ್ಪಮೊಯ್ಲಿ ಅವರು ಕೂಡ ದೇವೇಗೌಡರು ಹಾಗೂ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಮಗೆ ಬೆಂಬಲ ನೀಡುವಂತೆಯೂ ಕೋರಿದ್ದಾರೆ.