ಬೆಂಗಳೂರ: ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಜೆಡಿಎಸ್ ತನಗೆ 12 ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂದು ಪಟ್ಟುಹಿಡಿದಿತ್ತು. ನಂತರ 8 ಕ್ಷೇತ್ರಗಳು ಜೆಡಿಎಸ್ ಪಾಲಾಗಿತ್ತು. ಆದರೀಗ, ತನ್ನ ಪಾಲಿನ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡುವ ಮೂಲಕ 7 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಬಿಜೆಪಿ ವಿರುದ್ಧ ಸೆಣಸಲು ಪ್ರಬಲ ಸ್ಪರ್ಧಿಗಳಿಲ್ಲದ ಕಾರಣ ತಮ್ಮ ಚಿಹ್ನೆಯಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ಮುಂದಾಗಿತ್ತು. ಆದರೆ, ಕೆಲ ಕಾಂಗ್ರೆಸ್ ನಾಯಕರು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಿ.ವಿ. ಸದಾನಂದ ಗೌಡ ಸ್ಪರ್ಧಿಸುವುದು ಪಕ್ಕಾ ಆಗಿರುವುದರಿಂದ ಅವರ ಎದುರಾಳಿಯಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ಗೆ ಸಾಧ್ಯವಾಗಿರಲಿಲ್ಲ. ಮೊದಲು ದೇವೇಗೌಡರೇ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ ಅವರು ತುಮಕೂರಿನಿಂದ ಸ್ಪರ್ಧಿಸಲು ನಿರ್ಧರಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಬಿ.ಎಲ್. ಶಂಕರ್ ಅವರನ್ನು ತೆನೆ ಹೊತ್ತ ಮಹಿಳೆಯ ಚಿಹ್ನೆಯಡಿ ಅಖಾಡಕ್ಕೆ ಇಳಿಸಲು ದೇವೇಗೌಡರು ತಂತ್ರ ರೂಪಿಸಿದ್ದರು.
ಆದರೆ, ಬಿ.ಎಲ್. ಶಂಕರ್ ತಾವು ಸ್ಪರ್ಧಿಸುವುದಾದರೆ ಕಾಂಗ್ರೆಸ್ ಹೆಸರಿನಲ್ಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿತ್ತು. ಈ ಕಾರಣದಿಂದ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲಾಗಿದ್ದು, ಇಂದು ಅಥವಾ ನಾಳೆ ಬಿ.ಎಲ್. ಶಂಕರ್ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.
ಈ ಮೊದಲು ಕೂಡ ಕಾಂಗ್ರೆಸ್ ಬೆಂಗಳೂರು ಉತ್ತರ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಎದುರು ಬೇಡಿಕೆಯಿಟ್ಟಿತ್ತು. ಇದೀಗ ತಾನೇ ತಾನಾಗಿ ಆ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದರಿಂದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನಿನ್ನೆ ಮಧ್ಯರಾತ್ರಿ ಟ್ವೀಟ್ ಮೂಲಕ ದೇವೇಗೌಡರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದೆ.