ಇಂದು ದೇವೇಗೌಡ, ಮೊಮ್ಮಗ ನಿಖಿಲ್ ಸೇರಿ ಹಲವು ಘಟಾನುಘಟಿಗಳಿಂದ ಇಂದು ನಾಮಪತ್ರ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಬ್ಬರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ನಾಳೆ ಕೊನೆಯ ದಿನವಾದ್ದರಿಂದ ಮಂಡ್ಯದ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ತುಮಕೂರಿನಿಂದ ದೇವೇಗೌಡರು ಹಾಗೂ ಹಾಸನದ ಬಿಜೆಪಿ ಬಿಜೆಪಿ ಅಭ್ಯರ್ಥಿ ಎ. ಮಂಜು ಇಂದು ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಸುಮಲತಾ ಅಂಬರೀಷ್​ ಅವರಿಗೆ ಈಗಾಗಲೇ ಬಿಜೆಪಿ ಬೆಂಬಲ ಘೋಷಿಸಿದೆ. ಅವರ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶಿಸಲು ಜೆಡಿಎಸ್​ ಸಿದ್ಧತೆ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬೃಹತ್​ ಸಮಾವೇಶ ಏರ್ಪಡಿಸಲಾಗಿದೆ. ಲಕ್ಷಾಂತರ ಕಾರ್ಯಕರ್ತರ ಜೊತೆ ಹೋಗಿ ಇಂದು ನಿಖಿಲ್ ನಾಮಪತ್ರ ಸಲ್ಲಿಸಲಿದ್ದಾರೆ.

ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ, ಬಳಿಕ ಮಂಡ್ಯದ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ 11 ಗಂಟೆಗೆ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಲಿದ್ದಾರೆ. ಮಧ್ಯಾಹ್ನ 2ರಿಂದ 3 ಗಂಟೆಗೆಯೊಳಗೆ ನಿಖಿಲ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮಗನ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು ಬೆಂಬಲ ನೀಡಬೇಕೆಂದು ಅನಿತಾ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಆದರೆ, ಇಂದು ಬೇರೆ ಜಿಲ್ಲೆಗಳ ಪ್ರವಾಸದಲ್ಲಿರುವ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಳ್ಳುತ್ತಿಲ್ಲ.

ತುಮಕೂರಿನಿಂದ ದೇವೇಗೌಡರು ನಾಮಪತ್ರ ಸಲ್ಲಿಕೆ:

ಮಾಜಿ ಪ್ರಧಾನಿ ದೇವೇಗೌಡ ಕೂಡ ತುಮಕೂರು ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ, ತವರು ಜಿಲ್ಲೆ ಹಾಸನದ ಹೊಳೆನರಸೀಪುರದಲ್ಲಿ ಕುಲದೇವರಾದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ದೇವೇಗೌಡರು ನಂತರ ಹರದನಹಳ್ಳಿ ಈಶ್ವರ ದೇವಾಲಯ ಹಾಗೂ ಮಾವಿನಕೆರೆ ಬೆಟ್ಟದ ರಂಗನಾಥನಿಗೆ ನಾಮಪತ್ರ ಇಟ್ಟು ಪೂಜೆ ಸಲ್ಲಿಸಲಿದ್ದಾರೆ. ಪೂಜೆ ಮುಗಿಸಿ ಮಂಡ್ಯದಲ್ಲಿ ಮೊಮ್ಮಗನ ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನದ ನಂತರ ತುಮಕೂರಿನಲ್ಲಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ದೇವೇಗೌಡರ ಎದುರಾಳಿಯಾಗಿ ಕಾಂಗ್ರೆಸ್​ ಹಾಲಿ ಸಂಸದ ಮುದ್ದಹನುಮೇಗೌಡ ಕೂಡ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಹಾಸನದಿಂದ . ಮಂಜು ನಾಮಪತ್ರ ಸಲ್ಲಿಕೆ:

ಇನ್ನು, ಹಾಸನದಲ್ಲಿ ತನಗೆ ಕಾಂಗ್ರೆಸ್​ನಿಂದ ಟಿಕೆಟ್​ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ಸೇರಿ ಹಾಸನದಲ್ಲಿ ಜೆಡಿಎಸ್​ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಅಖಾಡಕ್ಕಿಳಿಯಲು ಸಜ್ಜಾಗಿರುವ ಎ. ಮಂಜು ಕೂಡ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.  ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಗ್ರಾಮದೇವತೆ ಹನ್ಯಾಳಮ್ಮನಿಗೆ ಪೂಜೆ ಸಲ್ಲಿಸಿ, ಮನೆದೇವರಾದ ವೆಂಕಟರಮಣ ಸ್ವಾಮಿಗೆ ಪೂಜೆ ನೆರವೇರಿಸಲಿದ್ದಾರೆ. ಎ. ಮಂಜು ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಶ್ರೀನಿವಾಸ್ ಪ್ರಸಾದ್ ಸಾಥ್ ನೀಡಲಿದ್ದಾರೆ. ಹಾಸನದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ಎ. ಮಂಜು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಮೈಸೂರು- ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್​ ಸಿಂಹ, ಜೆಡಿಎಸ್​- ಕಾಂಗಗ್ರೆಸ್​ ಮೈತ್ರಿ ಅಭ್ಯರ್ಥಿ ಸಿ.ಎಚ್​. ವಿಜಯಶಂಕರ್​, ಚಿಕ್ಕಬಳ್ಳಾಪುರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ವೀರಪ್ಪ ಮೊಯ್ಲಿ ಮುಂತಾದವರು ನಾಮಪತ್ರ ಸಲ್ಲಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ