ಬೆಂಗಳೂರು, ಮಾ.25-ನಕಲಿ ನಾಗಮಣಿಯನ್ನು ಅಸಲಿಯೆಂದು ನಂಬಿಸಿ ವಂಚಿಸಿದ್ದ ಹಾಗೂ ರೆಡ್ಸ್ಯಾಂಡ್ ಬೊ ಎಂಬ 2 ತಲೆಯ ಎರಡು ಹಾವುಗಳನ್ನು ಮಾರಾಟ ಮಾಡುತ್ತಿದ್ದ ಎರಡು ಪ್ರಕರಣಗಳಲ್ಲಿ ಮೂವರನ್ನು ಉತ್ತರ ವಿಭಾಗದ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಪ್ಯಾರುಬಾಯಿ, ತುಮಕೂರಿನ ಶಿವಣ್ಣ(50) ಮತ್ತು ಕೃಷ್ಣಪ್ಪ(64) ಬಂಧಿತ ಆರೋಪಿಗಳು.
ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಸ್ಕಾನ್ ಎದುರಿನ ಇಂದಿರಾ ಕ್ಯಾಂಟೀನ್ ಪಕ್ಕದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಹುಂಡೈ ಕೈಟಾ ಕಾರಿನಲ್ಲಿ ನಕಲಿ ನಾಗಮಣಿಯನ್ನು ಇಟ್ಟುಕೊಂಡು ಅಸಲಿ ನಾಗಮಣಿ ಎಂದು ನಂಬಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ಪಿಎಸ್ಐ ವೆಂಕಟರಮಣಪ್ಪ ಅವರಿಗೆ ಮಾಹಿತಿ ಲಭಿಸಿದೆ.
ಈ ಆಧಾರದ ಮೇಲೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿ ಪ್ಯಾರಾಬಾಯಿ ಎಂಬಾತನನ್ನು ಬಂಧಿಸಿ, ನಕಲಿ ನಾಗಮಣಿ, ಪ್ರಾಚೀನ ಕಾಲದ ತಟ್ಟೆ, ಚೊಂಬನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಎಪಿಎಂಸಿ ಯಾರ್ಡ್ ತರಕಾರಿ ಮಾರ್ಕೆಟ್ ರಸ್ತೆಯಲ್ಲಿ ರೆಡ್ ಸ್ಯಾಂಡ್ ಬೋ ಎಂಬ 2 ತಲೆಯ ಹಾವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾಗ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಎಸಿಪಿ ಧನಂಜಯ ಅವರ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೆಕ್ಟರ್ ವೆಂಕಟರಮಣಪ್ಪ, ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಶಿವಣ್ಣ ಮತ್ತು ಕೃಷ್ಣಪ್ಪ ಎಂಬ ಆರೋಪಿಗಳನ್ನು ಬಂಧಿಸಿ 2 ತಲೆಯ ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ.