ತುಮಕೂರು,ಮಾ.25- ಬೆಳ್ಳಂಬೆಳಗ್ಗೆ ಪಾವಗಡದ ಪ್ರವಾಸಿ ಮಂದಿರದ ಮುಂಭಾಗ ಮಹಿಳೆಯೊಬ್ಬರನ್ನು ನೂರಾರು ಜನರ ಸಮ್ಮುಖದಲ್ಲಿ ಬರ್ಬರವಾಗಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಾವಗಡ ವಿಶೇಷ ಪೊಲೀಸ್ ತಂಡ ಯಶಸ್ವಿಯಾಗಿದೆ.
ಕಳೆದ 23ರಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ವೆಂಕಟಾಪುರದ ನಿವಾಸಿ ಕವಿತಾ ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಹಾಡುಹಗಲೇ ನಡೆದ ಪರಿಣಾಮ ಪಾವಗಡ ತಾಲೂಕಿನ ಜನರನ್ನು ಬೆಚ್ಚಿ ಬೀಳಿಸಿತು .
ವಿಷಯ ತಿಳಿದ ಕೂಡಲೇ ತಕ್ಷಣವೇ ಪಾವಗಡ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಧುಸೂದನ್ ವೆಂಕಟೇಶ್ ಡಿವೈಎಸ್ಪಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಿದ್ದರು.
ಮಹಿಳೆ ಕೊಲೆಗೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತಂಡಕ್ಕೆ ಸಿಕ್ಕಿದ ಮಹತ್ವದ ಸುಳಿವು ಎಂದರೆ ಆಕೆಯ ಗಂಡನೇ ಅವಳನ್ನು ಹತ್ಯೆ ಮಾಡಿದ್ದಾನೆ ಎಂಬ ಮಾಹಿತಿ ದೊರಕಿದೆ.
ಕೊಲೆಯ ಜಾಡು ಹಿಡಿದ ವಿಶೇಷ ಪೊಲೀಸರ ತಂಡ
ಆಂಧ್ರಪ್ರದೇಶದ ವೃದ್ಧ ಮಂಡಲ ತಿರುಕಲ ಪಟ್ಟಣಂ ಗ್ರಾಮದ ಕವಿತ ಎಂಬ ಮಹಿಳೆಯನ್ನು ಪಾವಗಡ ತಾಲ್ಲೂಕಿನ ವೆಂಕಟಾಪುರ ನಿವಾಸಿ ಬಾಲಾಜಿ ಅವನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.
ಮದುವೆಯಾದ ನಂತರ ಈ ಇಬ್ಬರಿಗೆ ಎರಡು ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದು , ಕಳೆದ ಮೂರು ನಾಲ್ಕು ವರ್ಷಗಳಿಂದ ಗಂಡ ಹೆಂಡತಿಯರ ನಡುವೆ ಮನಸ್ತಾಪ ಉಂಟಾಗಿತ್ತು. ಇದರಿಂದ ಪತಿ ಬಾಲಾಜಿ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ.
ಕಳೆದ ಮೂರು ವರ್ಷಗಳಿಂದ ಗಂಡ ಹೆಂಡತಿ ಬೇರೆಯಾಗಿದ್ದು ಹೆಂಡತಿ ತನ್ನ ತವರು ಮನೆಯಲ್ಲಿ ವಾಸವಿದ್ದರು.
ಅರ್ಜಿ ವಿಚಾರಣೆ ಸಂಬಂಧ ಶನಿವಾರ ತವರು ಮನೆಯಿಂದ ತಿಪಟೂರಿನ ನ್ಯಾಯಾಲಯಕ್ಕೆ ಹಾಜರಾಗಲು ಕವಿತಾ ಬಂದಿದ್ದರು.ಈ ಸಂದರ್ಭದಲ್ಲಿ ಸ್ನೇಹಿತರಿಗಾಗಿ ಆಕೆ ಪ್ರವಾಸಿ ಮಂದಿರದ ಮುಂದೆ ಕಾಯುತ್ತಿದ್ದಾಗ ಹೊಂಚು ಹಾಕಿ ಕುಳಿತಿದ್ದ ಬಾಲಾಜಿ ಮಾರಕಾಸ್ತ್ರಗಳಿಂದ ತನ್ನ ಹೆಂಡತಿ ಕವಿತ ಮೇಲೆ ಹಲ್ಲೆ ಮಾಡಿ ಹತ್ಯೆಗೈಯ್ದು ಪರಾರಿಯಾಗಿದ್ದ.
ಪೊಲಿಸರಿಗೆ ಟವರ್ ಲೊಕೇಶನ್ ಆಧಾರದ ಮೇಲೆ ವೆಂಕಟಾಪುರದ ಗ್ರಾಮಸ್ಥರು ಕೊಟ್ಟ ಕೆಲವು ಸುಳಿವಿನ ಮೇರೆಗೆ ಕೂಡಲೇ ಬಾಲಾಜಿಯನ್ನು ರಾತ್ರಿ 2:30 ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ನಾನು ನನ್ನ ಹೆಂಡತಿಯನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿರುವುದು.ನಿಜ ಕಳೆದ ಮೂರು ನಾಲ್ಕು ವರ್ಷಗಳಿಂದ ಬೇರೆ ಇದ್ದ ನಮಗೆ ನ್ಯಾಯಾಲಯದಲ್ಲಿ ವಿಚಾರಣೆ ಅರ್ಜಿ ಸಲ್ಲಿಸಿದೆ ಆದರೆ ಆಕೆಯನ್ನು ಬಿಟ್ಟಿರಲು ಸಾಧ್ಯವಾಗದೆ ನಾನು ನನ್ನ ಹೆಂಡತಿಯನ್ನು ಹತ್ಯೆ ಮಾಡಿದ್ದೇನೆ ಎಂದು ಪೊಲೀಸರ ತನಿಖೆಯ ವೇಳೆ ಬಾಯಿಬಿಟ್ಟಿದ್ದಾನೆ.
ಕೊಲೆಯಾದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪಾವಗಡದ ವಿಶೇಷ ಪೆÇಲೀಸರ ತಂಡ ಯಶಸ್ವಿಯಾಗಿದೆ ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ ಕೋನ ವಂಶಿ ಕೃಷ್ಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಡಾಕ್ಟರ್ ಶೋಭಾರಾಣಿ ಡಿವೈಎಸ್ಪಿ ಶ್ರೀನಿವಾಸ್ ಇವರುಗಳು ವಿಶೇಷ ಪೊಲೀಸ್ ತಂಡ ಕಾರ್ಯವೈಕರಿ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.