ಜೆಡಿಎಸ್ ವಿರುದ್ಧ ಕುತಂತ್ರ ರಾಜಕಾರಣ ನಡೆಯುತ್ತಿದೆ-ಮುಖ್ಯಮಂತ್ರಿ ಕುಮಾರಸ್ವಾಮಿ

ಮೈಸೂರು,ಮಾ.25- ಚುನಾವಣಾ ಸಮಯದಲ್ಲಿ ಒಂದಲ್ಲ ಒಂದು ರೀತಿಯ ಕುತಂತ್ರ ನಡೆಯುತ್ತಿರುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.

ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ -ಹಾಸನ- ತುಮಕೂರು ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ವಿರುದ್ಧ ಕುತಂತ್ರ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು.

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಕಳೆದ 50 ವರ್ಷಗಳಿಂದಲೂ ಕಸರತ್ತು ನಡೆಯುತ್ತಿದೆ. ಆದರೆ ಇದುವರೆಗೂ ಸಾಧ್ಯವಾಗಿಲ್ಲ. ಇದಕ್ಕಾಗಿ ಒಂದು ವರ್ಗವೇ ಕೆಲಸ ಮಾಡುತ್ತಿದೆ ಎಂದು ದೂರಿದರು.

ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಂಬರೀಶ್ ಹೆಸರು ಹೇಳದೆ ಎರಡು ದಿನಗಳ ಕಾಲ ಪ್ರಚಾರ ಮಾಡಲಿ ಎಂದು ಸುಮಲತಾ ಅವರು ಸವಾಲು ಹಾಕಿದ್ದಾರಲ್ಲಾ ಎಂಬ ಪ್ರಶ್ನೆಗೆ ಪತ್ರಿಕ್ರಿಯಿಸಿದ ಅವರು, ನನಗೆ ಅಂಬರೀಶ್ ಹೆಸರು ಹೇಳಿ ಮತ ಕೇಳುವ ಅಗತ್ಯವಿಲ್ಲ. ಎರಡು ದಿನವಲ್ಲ, 2 ಗಂಟೆಯೂ ಅಲ್ಲ, 2 ನಿಮಿಷ ಕೂಡ ಅಂಬರೀಶ್ ಹೆಸರು ಹೇಳಿ ಮತ ಕೇಳೋಲ್ಲ ಎಂದರು.

ನಾನು ರಾಜ್ಯದ, ಮಂಡ್ಯದ ಜನತೆಗೆ ಮಾಡಿರುವ ದುಡಿಮೆ ಮೇಲೆ ನಾನು ಮತ ಕೇಳುತ್ತಿದ್ದೇನೆಯೇ ಹೊರತು ಯಾವುದೇ ಕಾರಣಕ್ಕೂ ಅಂಬರೀಶ್ ಹೆಸರು ಬಳಸಿಕೊಳ್ಳಲ್ಲ . ಅಂಬರೀಶ್ ಹೆಸರು ಬಳಿಸಿಕೊಳ್ಳುವ ಅಗತ್ಯ ಇರುವುದು ಅವರಿಗೆ, ಅವರು ಅಂಬಿ ಹೆಸರು ಹೇಳಿ ಮತ ಕೇಳಬೇಕು ನಾನಲ್ಲ ಎಂದರು.

ನಾನು ಮುಖ್ಯಮಂತ್ರಿಯಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು, ಅಂಬರೀಶ್ ಸ್ನೇಹಿತನಾಗಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಗೌರವ ಸೂಚಿಸಲು ಕೆಲವು ಕ್ರಮಗಳನ್ನು ಕೈಗೊಂಡಿದ್ದೇ ಹೊರತು ಅದನ್ನು ದುರುಪಯೋಗ ಪಡೆದುಕೊಳ್ಳಲು ಅಲ್ಲ ಎಂದು ಹೇಳಿದರು.

ರಾಜ್ಯದಲ್ಲಿ28 ಲೋಕಸಭಾ ಕ್ಷೇತ್ರಗಳಲ್ಲಿ ತೀವ್ರ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ಬಿಟ್ಟುಕೊಟ್ಟಿರುವ 21 ಕ್ಷೇತ್ರಗಳ ಹೊರತುಪಡಿಸಿ ಇನ್ನು 7 ಕ್ಷೇತ್ರಗಳಲ್ಲಿ ನಾವು ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಈ ವಯಸ್ಸಿನಲ್ಲಿ ನಮ್ಮ ತಂದೆಯವರು 2 ಕ್ಷೇತ್ರದಿಂದ ಸ್ಪರ್ಧಿಸುವುದು ಸೂಕ್ತವಲ್ಲ ಎಂಬ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಸಹ ಕಾಂಗ್ರೆಸ್‍ಗೆ ಬಿಟ್ಟು ಕೊಟ್ಟಿದ್ದೇವೆ ಎಂದು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಪರ-ವಿರೋಧ ಬರುವುದು ಸಹಜ.ಅದೇ ಪರಿಸ್ಥಿತಿ ತುಮಕೂರಿನಲ್ಲಿ ಬಂದಿದೆ.ನಮ್ಮ ತಂದೆ ಬೆಂಗಳೂರು ಉತ್ತರಕ್ಷೇತ್ರ ಬೇಡವೆಂದು ನಿರ್ಧರಿಸಿ ತುಮಕೂರಿನಿಂದ ಸ್ಪರ್ಧಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮುದ್ದಹನುಮೇಗೌಡರು ಸಹ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ.ಇದೆಲ್ಲ ಸಹಜ.ಇದನ್ನು ಎದುರಿಸುತ್ತೇವೆ ಎಂದು ಹೇಳಿದರು.

ನಾನು ಚುನಾವಣೆಯಲ್ಲಿ ಯಶಸ್ವಿ ಪಡೆಯಲು ನಾಡ ಅಧಿದೇವತೆಯ ಆಶೀರ್ವಾದ ಬೇಡಲು ಬಂದಿದ್ದೇನೆ. ರಾಜ್ಯದ ಜನತೆ ಹಾಗೂ ರೈತರಿಗೆ ಒಳೆಯದಾಗಲಿ, ಉತ್ತಮ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ