
ಬೆಂಗಳೂರು: ಮಂಡ್ಯದ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಕ್ಷೇತ್ರದಲ್ಲಿ ಸಿ.ಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬಿ ಪತ್ನಿ ಸುಮಲತಾ ಅಬ್ಬರದ ಪ್ರಚಾರ ಮಾಡುವ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿರುವ ನಿಖಿಲ್ ಕಾರ್ಯಕರ್ತರ ಜತೆಗೆ ಪ್ರಚಾರ ಮಾಡುತ್ತಿದ್ದರೇ, ಪಕ್ಷೇತರ ಅಭ್ಯರ್ಥಿ ಸುಮಲತಾ ತನ್ನ ಪತಿ ಅಂಬರೀಶ್ ಅಭಿಮಾನಿಗಳು ಮತ್ತು ಕೈ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಸುಮಲತಾರಿಗೆ ವಿವಿಧ ಪಕ್ಷಗಳ ಮುಖಂಡರು ಬೆಂಬಲ ನೀಡುವ ಭರವಸೆ ನೀಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಜೆಡಿಎಸ್ ಪಾಳೆಯಲ್ಲಿ ದುಗುಡ ಹೆಚ್ಚಾಗಿದೆ.
ಕಾಂಗ್ರೆಸ್ ನಾಯಕರು ಸುಮಲತಾ ಬೆನ್ನಿಗೆ ನಿಂತಿದ್ಧಾರೆ ಎಂದು ಜೆಡಿಎಸ್ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಅಲ್ಲದೇ ಎಚ್ಚೆತ್ತು ತಮ್ಮ ಸ್ವಂತ ಬಲದಿಂದಲೇ ಜೆಡಿಎಸ್ ಗೆಲ್ಲಲು ಅಬ್ಬರದ ಪ್ರಚಾರ ಕೈಗೊಂಡಿದ್ಧಾರೆ. ಜೆಡಿಎಸ್ ಕಾರ್ಯಕರ್ತರ ಜತೆಗೆ ನಿಖಿಲ್ ನಿನ್ನೆ ಕೆ.ಆರ್ ಪೇಟೇ ಭಾಗದಲ್ಲಿ ಮತಭೇಟೆ ಮಾಡಿದ್ದಾರೆ.
ಹಾಗೆಯೇ ಸುಮಲತಾ ಕೂಡ ಇದೇ ಭಾಗದಲ್ಲಿ ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಮತಯಾಚಿಸಿದ್ದಾರೆ.
ಇನ್ನು ಪ್ರಚಾರದ ಬಳಿಕ ಈ ಬಾರಿ ತಮ್ಮನ್ನು ಬೆಂಬಲಿಸುವಂತೆ ರೈತ ಸಂಘಕ್ಕೆ ಮನವಿ ಮಾಡಿದ್ದಾರೆ. ರೈತ ಸಂಘದ ನಾಯಕರಾಗಿದ್ದ ದಿ.ಪುಟ್ಟಣ್ಣಯ್ಯ ಪತ್ನಿ ಸುನೀತಾ ಅವರನ್ನು ಕ್ಯಾತನಹಳ್ಳಿಯ ಮನೆಯಲ್ಲಿ ಭೇಟಿ ಮಾಡಿದ್ದಾರೆ. ಸುಮಲತಾ ಮನವಿಗೆ ಸ್ಪಂದಿಸಿದ ಸುನೀತಾ ಪುಟ್ಟಣ್ಣಯ್ಯ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ಅತ್ತ ಸುಮಲತಾ ಗುಂಪಿನಲ್ಲಿ ಗುರುತಸಿಕೊಳ್ಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪಕ್ಷದ ವರಿಷ್ಠರು ಚಾಟಿ ಬೀಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಕಾರಣ ನೀಡಿ ಕಾಂಗ್ರೆಸ್ ಕಾರ್ಯಕರ್ತರಾದ ಇಂಡವಾಳು ಸಚ್ಚಿದಾನಂದ, ಹನಕೆರೆ ಶಶಿ ಎಂಬಿಬ್ಬರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹನಕೆರೆ ಶಶಿ ಪಕ್ಷ ಏನೇ ಅದೇಶ ಮಾಡಿದ್ರು, ಅದಕ್ಕೆ ಬಗ್ಗಲ್ಲ ಎಂದು ಹೇಳಿದ್ದಾರೆ. ಜತೆಗೆ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ಮತ್ತು ಸ್ವಾಭಿಮಾನಕ್ಕಾಗಿ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.
ಇತ್ತ ನಿಖಿಲ್ ಪ್ರಚಾರದ ವೇಳೆ ಬೂಕನಕೆರೆಯಲ್ಲಿ ದರ್ಶನ್ ಅಭಿಮಾನಿಗಳು ಡಿ ಬಾಸ್ ಘೋಣೆ ಕೂಗಿ ಜೆಡಿಎಸ್ ಅಭ್ಯರ್ಥಿಗೆ ಮುಜುಗರಕ್ಕೀಡು ಮಾಡಿದ್ದಾರೆ.
ಪೊಲೀಸರು ಘೋಷಣೆ ಕೂಗಿದವರ ವಿರುದ್ಧ ಲಾಠಿಪ್ರಹಾರ ಮಾಡಿದ್ದಾರೆ. ಸೋಮನಹಳ್ಳಿ ಬಳಿಯೂ ನಿಖಿಲ್ ಬೆಂಬಲಿಗರ ಕಾರಿಗೆ ಕಿಡಿಗೇಡಿಗಳಿ ಕಲ್ಲು ತೂರಿದ್ದಾರೆ. ಇದರ ಪರಿಣಾಮ ಕಾರು ಜಖಂಗೊಂಡಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಒಟ್ಟಾರೆ ಇಲ್ಲಿನ ಚುನಾವಣಾ ಅಖಾಡ ಇದೀಗ ರಣಾಂಗಣವಾಗಿದೆ. ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ತಂತ್ರ ಪ್ರತಿತಂತ್ರ ಎಣೆಯುತ್ತಿದ್ದಾರೆ. ಜಿಲ್ಲೆಯ ಮತದಾರ ಪ್ರಭು ಯಾರನ್ನು ಕೈ ಹಿಡಿಯುತ್ತಾನೆ ಅನ್ನೋದು ಮಾತ್ರ ಕುತೂಹಲವೇ.