ಹುಬ್ಬಳ್ಳಿ,ಮಾ.23- ನಿನ್ನೆ ತೀವ್ರ ಹೃದಯಾಘಾತದಿಂದ ನಿಧನರಾದ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಿ.ಎಸ್.ಶಿವಳ್ಳಿಯವರು ಗ್ರಾಮೀಣ ಭಾಗದಿಂದ ಬಂದು ನಿಷ್ಠೆ, ದಕ್ಷತೆ, ಸಮರ್ಥ ನಾಯಕರಾಗಿ ರಾಜಕೀಯದಲ್ಲಿ ಬೆಳೆದಿದ್ದರು ಎಂದು ಮಾಜಿ ಸಚಿವೆ ಉಮಾಶ್ರೀ ಸ್ಮರಿಸಿದ್ದಾರೆ.
ಶಿವಳ್ಳಿಯವರು ನನ್ನನ್ನು ಅಕ್ಕ ಎಂದೇ ಕರೆಯುತ್ತಿದ್ದರು. ಅವರನ್ನು ನಂಬಿದ ಬಡ ಕುಟುಂಬಗಳಿಗೆ ಹಾನಿಯಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಲಿ ಎಂದು ಮನವಿ ಮಾಡಿದರು.
ಶಿವಳ್ಳಿ ಅವರ ಅಗಲಿಕೆ ನಮ್ಮೆಲ್ಲರಿಗೂ ನೋವು ತಂದಿದೆ. ಅವರು ಸಾಧು ಹಾಗೂ ಸಂಪನ್ನ ರಾಜಕಾರಣಿ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಮೃತರ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಅವರು, ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ತೀವ್ರ ನಷ್ಟವಾಗಿದೆ.
ಸಿ.ಎಸ್.ಶಿವಳ್ಳಿಯವರು ಸಚಿವರಷ್ಟೇ ಅಲ್ಲ; ಒಬ್ಬ ಹೋರಾಟಗಾರರಾಗಿದ್ದರು ಎಂದು ಹೇಳಿದರು.
ಬಹಳ ಶ್ರಮದಿಂದ ಮೇಲೆ ಬಂದ ಶಿವಳ್ಳಿಯವರ ನಿಧನ ನೋವು ತಂದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಅವರ ಸಾವಿನ ನೋವಿನ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ನೀಡಲಿ ಎಂದರು.
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಶಿವಳ್ಳಿಯವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ ಎಂದರು.
ಆರ್.ವಿ.ದೇಶಪಾಂಡೆ, ಪ್ರಹ್ಲಾದ ಜೋಶಿ, ಸುರೇಶ್ ಅಂಗಡಿ, ಪ್ರಭಾಕರ್ ಕೋರೆ, ಶಾಸಕ ಪ್ರಸಾದ್ ಅಬ್ಬಯ್ಯ, ಅರವಿಂದ್ ಬೆಲ್ಲದ್, ವಿ.ಪಿ.ಲಿಂಗನಗೌಡರ್, ಶಂಕರ ಪಾಟೀಲ ಮುನೇಕೊಪ್ಪ, ಎಂ.ಎ.ಹಿಂಡಸಗೇರಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದರು.