ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ದೇವೇಗೌಡರ ನಿರ್ಧಾರ-ಸಂಸದ ಮುದ್ದಹನುಮೇಗೌಡ ಅಸಮಾಧಾನ

ತುಮಕೂರು, ಮಾ.23- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದ ಬೆನ್ನಲ್ಲೇ ಸಿಡಿದೆದ್ದಿರುವ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ.

ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗುತ್ತಿದ್ದಂತೆ ಅಸಮಾಧಾನಗೊಂಡಿದ್ದ ಮುದ್ದಹನುಮೇಗೌಡರು ತಮ್ಮ ಬೆಂಬಲಿಗರೊಂದಿಗೆ ನಡೆಸಿದ ಸಭೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂಬ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ.

ಮುದ್ದಹನುಮೇಗೌಡರ ಈ ನಿರ್ಧಾರದಿಂದ ದೇವೇಗೌಡರು ಮುಂದೆ ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ. ತುಮಕೂರಿನಿಂದ ಸ್ಪರ್ಧಿಸುವಂತೆ ಪಕ್ಷದ ಮುಖಂಡರು ಮಾಡಿದ ಒತ್ತಾಯಕ್ಕೆ ಮಣಿದು ಸೋಮವಾರ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿಯೂ ಗೌಡರು ಪ್ರಕಟಿಸಿದ್ದಾರೆ.

ಮುದ್ದಹನುಮೇಗೌಡರ ಸ್ಪರ್ಧೆಯ ನಿರ್ಧಾರದಿಂದ ಮೈತ್ರಿ ಪಕ್ಷಗಳ ನಡುವೆ ಹೊಸ ಕಗ್ಗಂಟು ಸೃಷ್ಟಿಯಾಗಿದೆ. ಹಾಲಿ ಸಂಸದರಿದ್ದರೂ ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವ ಬಗ್ಗೆ ಜಿಲ್ಲೆಯಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ಸ್ವತಃ ಮುದ್ದಹನುಮೇಗೌಡ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು.

ಈತನಕ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಯಾವುದೇ ನಿರ್ಧಾರ ಮೈತ್ರಿ ನಾಯಕರಿಂದ ಪ್ರಕಟವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಮುದ್ದಹನುಮೇಗೌಡರು ಅಭಿಪ್ರಾಯ ಸಂಗ್ರಹಿಸಿದರು.

ಮುದ್ದಹನುಮೇಗೌಡರು ಸ್ಪರ್ಧೆಗಿಳಿಯುವುದರಿಂದ ಮೈತ್ರಿ ಅಭ್ಯರ್ಥಿಗೆ ಬಂಡಾಯದ ಬಿಸಿ ಎದುರಿಸುವಂತಾಗಿದೆ. ಇದರಿಂದ ಉಭಯ ಪಕ್ಷಗಳ ನಾಯಕರು ಮಾತುಕತೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಮುದ್ದಹನುಮೇಗೌಡರ ಮನವೊಲಿಸುವ ಸಾಧ್ಯತೆಗಳನ್ನು ಕೂಡ ತಳ್ಳಿಹಾಕುವಂತಿಲ್ಲ.

ಸುದ್ದಿಗಾರರೊಂದಿಗೆ ಮಾತನಾಡಿದ ಮುದ್ದಹನುಮೇಗೌಡರು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಿರ್ಧಾರವನ್ನು ಪುನರ್ ಪರಿಶೀಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ತುಮಕೂರಿನ ಬಿಜಿಎಸ್ ವೃತ್ತದಿಂದ ಮೆರವಣಿಗೆ ಹೊರಟು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಘೋಷಣೆ ಮಾಡಿದರು.

ಜಿಲ್ಲೆಯ ಕಾಂಗ್ರೆಸ್ ನಾಯಕರ ಮನದಾಳದ ನಿರ್ಧಾರವನ್ನು ಅರ್ಥ ಮಾಡಿಕೊಂಡು ಮೈತ್ರಿ ನಾಯಕರು ಕ್ಷೇತ್ರ ಹಂಚಿಕೆ ಬಗ್ಗೆ ಪುನರ್ ಪರಿಶೀಲನೆ ಮಾಡಲಿದ್ದಾರೆ.

ಒಂದು ವೇಳೆ ಪುನರ್ ಪರಿಶೀಲನೆ ಮಾಡದಿದ್ದರೆ ಮುಂದಿನ ತಮ್ಮ ನಿರ್ಧಾರವನ್ನು ಸೋಮವಾರ ಪ್ರಕಟಿಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ