ಮಾಜಿ ಸಚಿವ ಎ.ನಾರಾಯಣಸ್ವಾಮಿಗೆ ಬಿಜೆಪಿ ಟಿಕೆಟ್

ಚಿತ್ರದುರ್ಗ, ಮಾ.23- ಹಾಲಿ ಸಂಸದ ಕಾಂಗ್ರೆಸ್‍ನ ಚಂದ್ರಪ್ಪ ಅವರ ಎದುರಾಳಿ ಯಾರಾಗಲಿದ್ದಾರೆ ಎಂಬುದಕ್ಕೆ ಉತ್ತರ ದೊರೆತಿದ್ದು , ಮಾಜಿ ಸಚಿವ ಎ.ನಾರಾಯಣಸ್ವಾಮಿಗೆ ಬಿಜೆಪಿ ಟಿಕೆಟ್ ಘೋಷಿಸುತ್ತಿದ್ದಂತೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಉಂಟಾಗಿದೆ.

ನಾರಾಯಣಸ್ವಾಮಿಗೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದ ಶಾಸಕರಾದ ಗೂಳಿಹಟ್ಟಿ ಶೇಖರ್ ಮತ್ತು ಚಂದ್ರಪ್ಪ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನು ಬಿಜೆಪಿ ವರಿಷ್ಠರು ನೀಡಿಲ್ಲ.

ಹೀಗಾಗಿ ಇಬ್ಬರು ಶಾಸಕರು ಸೇರಿದಂತೆ ಬೋವಿ ಸಮಾಜಕ್ಕೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಮೌನಕ್ಕೆ ಶರಣಾಗಿದ್ದಾರೆ.

ಬಿಜೆಪಿ ಹೈಕಮಾಂಡ್ ನಡೆಸಿದ 4 ಸಮೀಕ್ಷೆಯಲ್ಲೂ ನಾರಾಯಣ ಸ್ವಾಮಿ ಪರ ಒಲವು ತೋರಿ ಬಂದ ಹಿನ್ನೆಲೆಯಲ್ಲಿ ಯಾವುದೇ ಬೆದರಿಕೆಗೂ ವರಿಷ್ಠರು ಮಣಿಯದೆ ನಾರಾಯಣ ಸ್ವಾಮಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.

ಶಾಸಕರು ಕೇವಲ ತಮ್ಮ ಸಮುದಾಯಕ್ಕೆ ಮೀಸಲಾಗದೆ ಪಕ್ಷದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ವರಿಷ್ಠರು ಸೂಚಿಸಿರುವ ಅಭ್ಯರ್ಥಿ ಪರ ಕೆಲಸ ಮಾಡಬೇಕು.

ನಮಗೆ ಅಭ್ಯರ್ಥಿ ಮುಖ್ಯವಲ್ಲ. ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು ಎಂಬ ಮಾತುಗಳು ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ.

ಶಾಸಕ ತಿಪ್ಪಾರೆಡ್ಡಿ , ಮಾಜಿ ಶಾಸಕ ಶಿವಯೋಗಿ ಸ್ವಾಮಿ , ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಕುಮಾರ್ ನೇತೃತ್ವದಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ನಾರಾಯಣ ಸ್ವಾಮಿ ಅವರನ್ನು ಗೆಲ್ಲಿಸುವ ಕುರಿತಂತೆ ಚರ್ಚಿಸಲಾಯಿತು.

ಚಳ್ಳಕೆರೆ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಆಗಮಿಸಿದ್ದ ನಾರಾಯಣ ಸ್ವಾಮಿ ಅವರಿಗೆ ಚಳ್ಳಕೆರೆ ಬಿಜೆಪಿ ಕಾರ್ಯಕರ್ತರು ಅಭೂತಪೂರ್ವ ಸ್ವಾಗತ ಕೋರಿರುವುದು ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ವಾದಕ್ಕೆ ಪುಷ್ಟಿ ನೀಡುವಂತಿತ್ತು.

ಆದರೆ, ಭೋವಿ ಗುರುಪೀಠದ ಸ್ವಾಮೀಜಿ ನಮ್ಮ ಸಮುದಾಯದವರಿಗೆ ಟಿಕೆಟ್ ನೀಡದಿದ್ದರೆ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಸಭೆ ಕರೆದು ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿರುವುದರಿಂದ ಈ ಇಬ್ಬರು ಶಾಸಕರು ರಾಜೀನಾಮೆ ಕೊಡ್ತಾರಾ? ಅಥವಾ ಪಕ್ಷದ ಪರವಾಗಿ ಕೆಲಸ ಮಾಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ