ಬೆಂಗಳೂರು,ಮಾ.22-ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ದವಳಗಿರಿ ನಿವಾಸ ಇಂದು ಕೂಡ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು.
ಬೆಳಗಿನಿಂದಲೇ ಅವರ ನಿವಾಸಕ್ಕೆ ಪಕ್ಷದ ಮುಖಂಡರು, ಮಠಾಧೀಶರು, ಕಾರ್ಯಕರ್ತರು ಸೇರಿದಂತೆ ಅನೇಕರು ಆಗಮಿಸಿದ್ದರಿಂದ ದವಳಗಿರಿ ಇಂದು ಅಕ್ಷರಶಃ ರಾಜಕೀಯ ಚಟುವಟಿಕೆಗಳಿಂದ ಕೂಡಿತ್ತು.
ಒಂದೆಡೆ ಟಿಕೆಟ್ ಸಿಕ್ಕವರು, ಇನ್ನೊಂದೆಡೆ ಟಿಕೆಟ್ ವಂಚಿತರು ಇದರ ನಡುವೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಮತ್ತೆ ಕೆಲವರು ದಾಂಗುಡಿ ಇಟ್ಟಿದ್ದರು. ಮೊದಲು ಚಿತ್ರದುರ್ಗದ ಭೋವಿ ಮಠ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಗಮಿಸಿದ್ದರು.
ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರದಿಂದ ಭೋವಿ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಬಿಎಸ್ವೈಗೆ ಮನವಿ ಮಾಡಿದರು. ಜಿಲ್ಲೆಯಲ್ಲಿ ನಮ್ಮ ಸಮುದಾಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯ ಬೆಂಬಲ ನೀಡಿದ್ದರಿಂದ ಬಿಜೆಪಿಗೆ ಹೆಚ್ಚಿನ ಅನುಕೂಲವಾಯಿತು. ಹೀಗಾಗಿ ನಮ್ಮ ಸಮುದಾಯದ ಒಬ್ಬರಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದರು.
ಮೊದಲಿನಿಂದಲೂ ನಾವು ಚಿತ್ರದುರ್ಗ ಅಥವಾ ಕೋಲಾರದಲ್ಲಿ ಭೋವಿ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದೇವೆ. ಚಿತ್ರದುರ್ಗದಲ್ಲಿ ಮಾಜಿ ಸಚಿವ ಎ.ನಾರಾಯಣಸ್ವಾಮಿಗೆ ಟಿಕೆಟ್ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಶಾಸಕರಾದ ಗೂಳಿಹಟ್ಟಿ ಶೇಖರ್, ಚಂದ್ರಪ್ಪ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಇಷ್ಟಾದರೂ ನೀವು ಯಾವ ಕಾರಣಕ್ಕಾಗಿ ನಾರಾಯಣಸ್ವಾಮಿಗೆ ಟಿಕೆಟ್ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ನಮ್ಮ ಸಮುದಾಯದವರೊಬ್ಬರಿಗೆ ಟಿಕೆಟ್ ಕೊಡದಿದ್ದರೆ ನಾಳೆ ಚಿತ್ರದುರ್ಗದಲ್ಲಿ ಭೋವಿ ಸಮಾಜದ ಬೃಹತ್ ಸಮಾವೇಶವನ್ನು ನಡೆಸುತ್ತೇವೆ. ಅಷ್ಟರೊಳಗೆ ತೀರ್ಮಾನ ಪ್ರಕಟವಾಗದಿದ್ದರೆ ಬಿಜೆಪಿ ವಿರುದ್ಧ ಮತ ಹಾಕಬೇಕಾಗುತ್ತದೆ ಎಂದು ಸ್ವಾಮೀಜಿ ನೇರ ಮಾತುಗಳಲ್ಲೇ ಎಚ್ಚರಿಸಿದ್ದಾರೆ.
ಸ್ವಾಮೀಜಿ ಭೇಟಿ ನಂತರ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಡಿ.ಎಸ್.ವೀರಯ್ಯ ಆಗಮಿಸಿದರು. ಈ ಕ್ಷೇತ್ರದಿಂದ ಛಲವಾದಿ ನಾರಾಯಣಸ್ವಾಮಿಗೆ ಟಿಕೆಟ್ ನೀಡಬಹುದು ಎಂಬ ಹಿನ್ನೆಲೆಯಲ್ಲಿ ತಮಗೇ ಟಿಕೆಟ್ ನೀಡುವಂತೆ ಅವರು ಕೋರಿದ್ದಾರೆ.
ನಾನು ಮೊದಲಿನಿಂದಲೂ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಎರಡು ಬಾರಿ ಕಡಿಮೆ ಅಂತರದಿಂದ ಪರಾಭವಗೊಂಡಿದ್ದೇನೆ. ಈ ಬಾರಿ ಗೆಲ್ಲುವ ವಿಶ್ವಾಸವಿದೆ. ಹೀಗಾಗಿ ನಮಗೇ ಟಿಕೆಟ್ ನೀಡುವಂತೆ ವೀರಯ್ಯ ಬಿಎಸ್ವೈ ಅವಲತ್ತುಕೊಂಡರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರಿಯನ್ನು ಕಣಕ್ಕಿಳಿಸುವ ಸಂಬಂಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಯಡಿಯೂರಪ್ಪನವರ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದರು.
ಈ ಮೊದಲು ಇದೇ ಕ್ಷೇತ್ರದಿಂದ ಯೋಗೇಶ್ವರ್ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ಅವರ ಪುತ್ರಿ ನಿಶಾಗೆ ಟಿಕೆಟ್ ನೀಡಲು ಕೇಂದ್ರ ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ.
ಹೀಗಾಗಿ ನಾಮಪತ್ರ ಸಲ್ಲಿಕೆ, ಚುನಾವಣಾ ಕಾರ್ಯತಂತ್ರ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಯೋಗೇಶ್ವರ್ ಬಿಜೆಪಿ ಅಧ್ಯಕ್ಷರೊಂದಿಗೆ ಚರ್ಚಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾಗಲಿರುವ ಮಾಜಿ ಸಚಿವ ಡಾ.ಮಾಲಕರೆಡ್ಡಿ ಕೂಡ ಆಗಮಿಸಿದ್ದರು. ಹೀಗಾಗಿ ಇಂದು ಡಾಲರ್ಸ್ ಕಾಲೋನಿಯ ದವಳಗಿರಿ ನಿವಾಸ ದಿನಪೂರ್ತಿ ರಾಜಕೀಯ ಚಟುವಟಿಕೆಯಿಂದ ಕೂಡಿತ್ತು.