ಮಂಡ್ಯ ಲೊಕಸಭಾ ಕ್ಷೇತ್ರ-ಸುಮಲತಾಗೆ ಬೆಂಬಲ ನೀಡಲು ಬಿಜೆಪಿ ತೀರ್ಮಾನ

ಬೆಂಗಳೂರು,ಮಾ.22- ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ಚಿತ್ರನಟಿ ಸುಮಲತಾ ಅಂಬರೀಶ್ ಎದುರು ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ನೀಡಲು ತೀರ್ಮಾನಿಸಿದೆ.

ಯಾವುದಕ್ಕೂ ಇರಲಿ ಎಂಬ ಕಾರಣಕ್ಕಾಗಿ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ ಅವರಿಂದ ನಾಮಪತ್ರ ಸಲ್ಲಿಸಲಿದೆ.

ಬಳಿಕ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದರೆ ನಂತರ ಅಶ್ವಥ್‍ನಾರಾಯಣ ಕಣದಿಂದ ಹಿಂದೆ ಸರಿಯಲಿದ್ದಾರೆ.

ಏಕೆಂದರೆ ನಾಳೆ ಸುಮಲತಾ ಯಾವುದೋ ಒತ್ತಡಕ್ಕೆ ಮಣಿದು ಕಣದಿಂದ ಹಿಂದೆ ಸರಿದರೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೆ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.

ಈ ಹಿಂದೆ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ಮತದಾನದ ಮೂರು ದಿನಕ್ಕೂ ಮುನ್ನ ನಾಮಪತ್ರವನ್ನು ಹಿಂಪಡೆದಿದ್ದರು. ಇದರಿಂದ ಬಿಜೆಪಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.

ಇದರಿಂದ ಪಾಠ ಕಲಿತಿರುವ ಬಿಜೆಪಿ ಅಶ್ವಥ್ ನಾರಾಯಣ ಅವರಿಗೆ ನಾಮಪತ್ರ ಸಲ್ಲಿಸಲು ಸೂಚಿಸಲಿದೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನ ಅವರು ಕಣದಿಂದ ಹಿಂದೆ ಸರಿಯಲಿದ್ದಾರೆ.

ಅಂದಹಾಗೆ ಬಿಜೆಪಿ ಸುಮಲತಾಗೆ ಬೆಂಬಲ ನೀಡುವುದರ ಹಿಂದೆ ನಾನಾ ರಾಜಕೀಯ ಲೆಕ್ಕಾಚಾರಗಳು ಅಡಗಿವೆ. ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪರಾಭವಗೊಂಡರೆ ಇದರ ಪರಿಣಾಮ ನೇರವಾಗಿ ರಾಜ್ಯ ಸರ್ಕಾರದ ಮೇಲೆ ಬೀಳಲಿದೆ.

ಮಂಡ್ಯದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಜೆಡಿಎಸ್‍ಗೆ ಬೆಂಬಲ ನೀಡದೆ ಸುಮಲತಾ ಜೊತೆ ಕೈ ಜೋಡಿಸಿದ್ದರಿಂದಲೇ ಸೋಲುಂಟಾಯಿತು ಎಂದು ದಳಪತಿಗಳು ಕೈ ಪಕ್ಷದ ಮೇಲೆ ಮುಗಿಬೀಳಬಹುದು.

ಇದರಿಂದ ಎರಡು ಪಕ್ಷದ ನಡುವೆ ಆರೋಪ, ಪ್ರತ್ಯಾರೋಪ, ಟೀಕೆಗಳು ಎದುರಾಗಿ ಸರ್ಕಾರ ವಿಚ್ಛೇಧನ ಹಂತಕ್ಕೂ ಬಂದರೂ ಬರಬಹುದು ಎಂಬ ದೂರದೃಷ್ಟಿ ಅಡಗಿದೆ. ಜೊತೆಗೆ ಮಂಡ್ಯದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಸಂಘಟನೆ ಇಲ್ಲದಿರುವುದು.

ಒಂದು ವೇಳೆ ಅಭ್ಯರ್ಥಿ ಠೇವಣಿ ಕಳೆದುಕೊಂಡು ಮುಖಭಂಗಕ್ಕೊಳಗಾಗಬಹುದು ಎಂಬ ಭೀತಿಯಿಂದ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ