ಬೆಂಗಳೂರು, ಮಾ.22- ಪ್ರಸಕ್ತ ಲೋಕಸಭೆ ಚುನಾವಣೆಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಪಿ.ಸಿ.ಮೋಹನ್, ನಟ ಪ್ರಕಾಶ್ರಾಜ್ ಸೇರಿದಂತೆ ಇಂದು ಪ್ರಮುಖ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದರು.
ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡುವುದು ವಿಳಂಬವಾದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಮುಂದಾಗಿರಲಿಲ್ಲ. ನಿನ್ನೆಯಷ್ಟೆ ಬಿಜೆಪಿ 21ಕ್ಷೇತ್ರಗಳ ಅಭ್ಯರ್ಥಿಗಳ ಪ್ರಕಟಿಸಿದ್ದರೂ ಇನ್ನೂ 7ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂದು ಸಂಜೆ ಪ್ರಕಟವಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ 20 ಹಾಗೂ ಜೆಡಿಎಸ್ 8ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಮೈತ್ರಿ ಮಾಡಿಕೊಂಡಿದ್ದರೂ. ಉಭಯಪಕ್ಷಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿಲ್ಲ. ಹೀಗಾಗಿ ಲೋಕಸಭೆ ಚುನಾವಣೆ ಮಂಕಾದಂತೆ ಕಾಣತೊಡಗಿತ್ತು. ಈಗಾಗಲೇ ಪ್ರಮುಖರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿ ಪ್ರಚಾರಕ್ಕಿಳಿದುರುವುದರಿಂದ ಲೋಕಸಭೆ ಚುನಾವಣೆ ಅಖಾಡ ರಂಗೇರುವ ಲಕ್ಷಣಗಳು ಗೋಚರಿಸ ತೊಡಗಿವೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನಟ ಪ್ರಕಾಶ್ ರಾಜ್ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ಸಂಸದ ಪಿ.ಸಿ.ಮೋಹನ್ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಅಧಿಕಾರಿ ಲೋಕೇಶ್ಅವರಿಗೆ ನಾಮಪತ್ರ ಸಲ್ಲಿಸಿದರು. ಪಿ.ಸಿ.ಮೋಹನ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕ ಅರವಿಂದ್ ಲಿಂಬಾವಳಿ ಸಾಥ್ ನೀಡಿದರು.
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಜ್ವಲ್ ರೇವಣ್ಣ ಅವರು, ಸಚಿವ ರೇವಣ್ಣ ಹಾಗೂ ತಾಯಿ ಭವಾನಿ ಅವರೊಂದಿಗೆ ಹೊಳೆನರಸೀಪುರ ಲಕ್ಷ್ಮೀನರಸಿಂಹಸ್ವಾಮಿ, ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹಾಸನ ನಗರದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮೆರವಣಿಗೆ ನಡೆಸಿ ಮಧ್ಯಾಹ್ನ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ ಹಲವು ನಾಯಕರು ಹಾಜರಿದ್ದರು.
ನಾಮಪತ್ರ ಸಲ್ಲಿಸುವ ಮುನ್ನ ಪ್ರಕಾಶ್ ರಾಜ್ ಆಸ್ಟಿನ್ ಟೌನ್ ನಂದಾ ಮೈದಾನದಿಂದ ಬಿಬಿಎಂಪಿ ಕೇಂದ್ರ ಕಚೇರಿಯ ವರೆಗೆ ತಮ್ಮ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಮೆರಣಿಗೆಯಲ್ಲಿ ಆಗಮಿಸಿ ಉಮೇದುವಾರಿಕೆಯನ್ನು ಸಲ್ಲಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದಿಂದ ಸಿಪಿಎಂನ ಅಭ್ಯರ್ಥಿ ಶಿವಣ್ಣ ಅವರು ನಾಮಪತ್ರ ಸಲ್ಲಿಸಿದ್ದಾರೆ. ತುಮಕೂರು ಟೌನ್ಹಾಲ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಮೆರವಣಿಗೆ ನಡೆಸಿದ ಶಿವಣ್ಣ ಅವರು ಜಿಲ್ಲಾಧಿಕಾರಿ ರಾಕೇಶ್ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈಗಾಗಲೇ ಮಾಜಿ ಸಂಸದ ಜಿ.ಎಸ್.ಬಸವರಾಜು ತುಮಕೂರು ಲೋಕಸಭಾಕ್ಷೇತ್ರದಲ್ಲಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಅಂಬರೀಷ್ ಅವರ ಪತ್ನಿ ನಟಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದಲೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಲ್ಲಿ ಮುಂದಿದ್ದಾರೆ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ನಿನ್ನೆಯವರೆಗೆ 37 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನ್ನು ಸಲ್ಲಿಸಿದ್ದಾರೆ.
ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.