ಬಿಜೆಪಿ ಇನ್ನೂ 7 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿ-ಆಕಾಂಕ್ಷಿಗಳ ತಳಮಳ

ಬೆಂಗಳೂರು,ಮಾ.22- ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿರುವುದರಿಂದ ಉಳಿದ 7 ಕ್ಷೇತ್ರಗಳಿಗೆ ಘೋಷಣೆ ಮಾಡದಿರುವುದು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ.

ಹಾಗೆ ನೋಡಿದರೆ ರಾಜ್ಯ ಬಿಜೆಪಿ ನಾಯಕರು 28 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸುವುದಾಗಿ ಹೇಳುತ್ತಾ ಬಂದಿದ್ದರು.

ಆದರೆ ನಿನ್ನೆ ಪ್ರಕಟಗೊಂಡ ಪಟ್ಟಿಯಲ್ಲಿ 21 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿ 7 ಕ್ಷೇತ್ರಗಳಿಗೆ ಹೆಸರು ಪ್ರಕಟಿಸದಿರುವುದು ನಾನಾ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಅದರಲ್ಲೂ ಕೊಪ್ಪಳದ ಸಂಸದ ಕರಡಿ ಸಂಗಣ್ಣ, ಬಿಜೆಪಿಯ ಭದ್ರಕೋಟೆ ಎನಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹೆಸರು ತಡೆ ಹಿಡಿದಿರುವುದು ಗೊಂದಲಗಳಿಗೆ ಕಾರಣವಾಗಿದೆ.

ಭಾನುವಾರ ನಡೆದ ಕೋರ್ ಕಮಿಟಿಯಲ್ಲಿ ಕೊಪ್ಪಳ ಹಾಗೂ ಬೆಂಗಳೂರು ದಕ್ಷಿಣದಿಂದ ಅಭ್ಯರ್ಥಿಗಳ ಹೆಸರನ್ನು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗಿತ್ತು.

ಕೊಪ್ಪಳದಿಂದ ಕರಡಿ ಸಂಗಣ್ಣನವರಿಗೆ, ಬೆಂಗಳೂರು ದಕ್ಷಿಣದಿಂದ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಹೆಸರನ್ನು ಪಟ್ಟಿಯಲ್ಲಿ ಕಳುಹಿಸಿಕೊಡಲಾಗಿತ್ತು.

ಆದರೆ ಇದಕ್ಕಿದ್ದಂತೆ ಈ ಎರಡು ಕ್ಷೇತ್ರಗಳಿಗೆ ಯಾವ ಕಾರಣಕ್ಕಾಗಿ ಅಭ್ಯರ್ಥಿ ಘೋಷಣೆ ಮಾಡಲಾಗಿಲ್ಲ ಎಂಬುದನ್ನು ಸ್ವತಃ ರಾಜ್ಯ ನಾಯಕರಿಗೆ ಕಸಿವಿಸಿ ತಂದಿದೆ.

ಬೇರೊಬ್ಬ ಅಭ್ಯರ್ಥಿ:
ಮೂಲಗಳ ಪ್ರಕಾರ ಕೊಪ್ಪಳದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಪುಕಾರು ಹಬ್ಬಿದೆ. ಒಂದು ವೇಳೆ ಅವರು ಸ್ಪರ್ಧಿಸಿದರೆ ಎಂಬ ಕಾರಣಕ್ಕೆ ಬಿಜೆಪಿ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಮುಂದಾಗಿದೆ.

ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಹಿತೈಷಿಗಳು ಮತ್ತು ಬೆಂಬಲಿಗರು ಸ್ಪರ್ಧಿಸುವಂತೆ ಒತ್ತಡ ಹಾಕಿದ್ದಾರೆ. ಆದರೆ ನಾನು ರಾಜ್ಯ ಕಾರಣದಲ್ಲಿ ಉಳಿಯುತ್ತೇನೆ ಎಂದು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ.

ಒಂದೊಂದು ಕ್ಷೇತ್ರವು ಬಹುಮುಖ್ಯವಾಗಿರುವುದರಿಂದ ಕೆಲವು ಪ್ರಬಲ ನಾಯಕರನ್ನೇ ಅಖಾಡಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಅಭ್ಯರ್ಥಿಯಾದರೆ ಕರಡಿ ಸಂಗಣ್ಣ ಬದಲು ಬೇರೊಬ್ಬರು ಸ್ಪರ್ಧಿಸುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಈ ಕ್ಷೇತ್ರವನ್ನು ಮುಕ್ತವಾಗಿಟ್ಟುಕೊಂಡಿದೆ.

ಸತತ 6 ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದ ಬೆಂಗಳೂರು ದಕ್ಷಿಣದಿಂದ ಯಾವ ಕಾರಣಕ್ಕಾಗಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿಲ್ಲ ಎಂಬುದು ರಾಜ್ಯ ನಾಯಕರಿಗೂ ಅರ್ಥವಾಗಿಲ್ಲ. ಕಾಂಗ್ರೆಸ್ ಈ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದರ ಮೇಲೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ.

ಚಿಕ್ಕೋಡಿಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ , ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ನಡುವೆ ಸ್ಪರ್ಧೆ ಇರುವುದರಿಂದ ಇದು ಕೂಡ ಬಾಕಿ ಉಳಿದಿದೆ.

ರಮೇಶ್ ಕತ್ತಿ ಅವರು ಶಾಸಕ ಉಮೇಶ್ ಕತ್ತಿ ಸಹೋದರ. ಇನ್ನು ಪ್ರಭಾಕರ್ ಕೋರೆ ಯಡಿಯೂರಪ್ಪನವರ ಆಪ್ತರು. ಮೂವರು ಕೂಡ ಅವರ ಆಪ್ತವಲಯದಲ್ಲಿ ಇರುವುದರಿಂದ ಯಾರಿಗೆ ಟಿಕೆಟ್ ನೀಡಬೇಕೆಂಬುದು ಯಕ್ಷ ಪ್ರಶ್ನೆಯಾಗಿದೆ.

ಕೋಲಾರದಲ್ಲಿ ಛಲವಾದಿ ನಾರಾಯಣಸ್ವಾಮಿ,ಡಿ.ಎಸ್.ವೀರಯ್ಯ ನಡುವೆ ಸ್ಪರ್ಧೆ ಏರ್ಪಟ್ಟಿರುವುದರಿಂದ ಟಿಕೆಟ್ ಘೋಷಣೆಯಾಗಿಲ್ಲ.ಬಹುತೇಕ ಛಲವಾದಿ ನಾರಾಯಣಸ್ವಾಮಿಯವರೇ ಅಭ್ಯರ್ಥಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ವೀರಯ್ಯಬಂಡಾಯವೇಳಬಹುದು ಎಂಬ ಕಾರಣದಿಂದ ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ.

ರಾಯಚೂರಿನಲ್ಲಿ ಅಮರೇಶ್ ನಾಯಕ್, ಅನಂತರಾಜ್ ನಾಯಕ್, ಮಾಜಿ ಶಾಸಕ ತಿಪ್ಪರಾಜು ನಡುವೆ ಸ್ಪರ್ಧೆ ಇದೆ. ಕೊನೆ ಕ್ಷಣದಲ್ಲಿ ದೇವದುರ್ಗ ಶಾಸಕ ಶಿವನಗೌಡ ನಾಯಕ್ ನನಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಉಳಿದಂತೆ ಬೆಂಗಳೂರು ಗ್ರಾಮಾಂತರದಲ್ಲಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಇಲ್ಲವೇ ಅವರ ಪುತ್ರಿ ನಿಶಾ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ